ಸಂಭಲ್ : ಉತ್ತರ ಪ್ರದೇಶದ ಸಂಭಲ್‌ನಲ್ಲಿ 46 ವರ್ಷಗಳ ಬಳಿಕ ಬಾಗಿಲು ತೆರೆಯಲಾಗಿರುವ ಭಸ್ಮ ಶಂಕರ್ ದೇವಾಲಯದ ಬಾವಿಯೊಳಗೆ ದೇವರ ಮೂರು ಭಗ್ನ ಮೂರ್ತಿಗಳು ಪತ್ತೆಯಾಗಿವೆ.
ಡಿ. 13ರಂದು ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ 'ಶ್ರೀ ಕಾರ್ತೀಕ ಮಹಾದೇವ ದೇಗುಲ' (ಭಸ್ಮ ಶಂಕರ್ ದೇಗುಲ) ಮತ್ತು ಅದರ ಸಮೀಪ ಬಾವಿ ಪತ್ತೆಯಾಗಿತ್ತು.
ದೇವಾಲಯದಲ್ಲಿ ಹನುಮ ಮೂರ್ತಿ ಮತ್ತು ಶಿವಲಿಂಗ ನೆಲೆಸಿವೆ. 1978ರಿಂದ ಈ ದೇಗುಲ ಬಾಗಿಲು ಮುಚ್ಚಿತ್ತು.
'ದೇವಾಲಯ ಮತ್ತು ಅದರ ಬಳಿಯ ಬಾವಿಯಲ್ಲಿ ಉತ್ಖನನ ನಡೆಸಲಾಗುತ್ತಿದೆ. ಈ ವೇಳೆ ಬಾವಿಯಲ್ಲಿ 10ರಿಂದ 12 ಅಡಿ ಅಗೆದ ಬಳಿಕ ಮೂರು ಮೂರ್ತಿಗಳು ಪತ್ತೆಯಾಗಿವೆ. ಅದರಲ್ಲಿ ಮೊದಲಿಗೆ ರುಂಡ ಬೇರ್ಪಟ್ಟಿರುವ ಪಾರ್ವತಿ ಮೂರ್ತಿ, ಬಳಿಕ ಗಣೇಶ ಮತ್ತು ಲಕ್ಷ್ಮಿ ಮೂರ್ತಿಗಳು ಪತ್ತೆಯಾದವು ಎಂದು ಸಂಭಲ್‌ನ ಜಿಲ್ಲಾಧಿಕಾರಿ ರಾಜೇಂದರ್ ಪೆನ್ಸಿಯಾ ಸುದ್ದಿಗಾರರಿಗೆ ತಿಳಿಸಿದರು.
'ಈ ಮೂರ್ತಿಗಳು ಬಾವಿಯೊಳಗೆ ಹೇಗೆ ಬಂದವು. ಅವು ಯಾವ ಕಾಲದವು ಮತ್ತು ಹೇಗೆ ಭಗ್ನವಾದವು ಎಂಬುದು ತನಿಖೆಯ ಬಳಿಕ ಗೊತ್ತಾಗುತ್ತದೆ' ಎಂದು ಅವರು ಪ್ರತಿಕ್ರಿಯಿಸಿದರು.
'ದೇಗುಲದ ಸುತ್ತಮುತ್ತಲಿನ ಒತ್ತುವರಿಗಳನ್ನು ಕೆಲವರು ತಾವಾಗಿಯೇ ತೆರವುಗೊಳಿಸಿದ್ದಾರೆ. ಇನ್ನೂ ಕೆಲವರಿಗೆ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಈ ಕುರಿತು ಮುಂದಿನ ಪ್ರಕ್ರಿಯೆಗಳನ್ನು ಪಾಲಿಕೆ ಮಾಡುತ್ತದೆ' ಎಂದು ಅವರು ಹೇಳಿದರು.