ತಿರುವನಂತಪುರಂ: ಕೇರಳದಲ್ಲಿ ಹೆಚ್ಚುತ್ತಿರುವ ವಾಹನ ಅಪಘಾತವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಇಲಾಖೆ, ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ಆಯೋಜಿಸಲು ತೀರ್ಮಾನಿಸಿದೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೊಣೆಗಾರಿಕೆ ಹೊಂದಿರುವ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಎಲ್ಲ ಜಿಲ್ಲೆಗಳ ಎಸ್ಪಿಗಳು, ರೇಂಜ್ ಡಿಜಿಪಿ, ಐಜಿಗಳ ಆನ್‍ಲೈನ್ ಸಭೆ ಆಯೋಜಿಸಿ ವಾಹನ ಅಪಘಾತಗಳ ಬಗ್ಗೆ ಚರ್ಚೆ ನಡೆಸಲು ತೀಮಾನಿÂಸಿದ್ದಾರೆ. ಕಳೆದ ಒಂದು ವಾರದಲ್ಲಿ ಪತ್ತನಂತಿಟ್ಟ, ಪಾಲ್ಘಾಟ್ ಜಿಲ್ಲೆಗಳಲ್ಲಿ ನಡೆದ ಭೀಕರ ರಸ್ತೆ ಅಪಘಾತಗಳಿಂದ ವಿದ್ಯರ್ಥಿಗಳ ಸಹಿತ ಎಂಟಕ್ಕೂ ಹೆಚ್ಚುಮಂದಿ ಪ್ರಾಣ ಕಳೆದುಕೊಂಡಿರುವುದಲ್ಲದೆ, ಇತರ ಜಿಲ್ಲೆಗಳಲ್ಲಿ ಅಪಘಾತ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದನ್ನು ಮನಗಂಡು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಅಪಘಾತ ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.
ಅಮಲು ಪದಾರ್ಥ ಸೇವಿಸಿ ವಾಹನ ಚಲಾವಣೆ, ಅತಿಯಾದ ವೇಗ, ಸಂಚಾರಿ ಕಾನೂನು ಉಲ್ಲಂಘನೆ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಿದೆ. ಕಾಸರಗೋಡು ಜಿಲ್ಲೆಯಲ್ಲಿ ಚೆರ್ಕಳ-ಜಾಲ್ಸೂರ್ ರಸ್ತೆಯ ಕೋಟೂರು ತಿರುವನ್ನು ರಾಜ್ಯದಲ್ಲೇ ಅತ್ಯಂತ ಹೆಚ್ಚು ಅಪಘಾತ ಸಂಭವಿಸುವ ಪ್ರದೇಶವೆಂದು ಈಗಾಗಲೇ ಗುರುತಿಸಲಾಗಿದ್ದು, ಇಲ್ಲಿ ಅಪಘಾತರಹಿತ ವಲಯವನ್ನಾಗಿಸಲು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಕಳೆದ ವರ್ಷ ಈ ಪ್ರದೇಶದಲ್ಲಿ 15ಕ್ಕೂ ಹೆಚ್ಚು ಅಪಘಾತ ಸಂಭವಿಸಿತ್ತು. ಕೋಟೂರು ತಿರುವನ್ನು ಮತ್ತಷ್ಟು ಅಗಲಗೊಳಿಸಿ ಅಗತ್ಯ ಬದಲಾವಣೆ ತಂದುಕೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ, ಇದುವರೆಗೆ ಕಾರ್ಯಗತಗೊಂಡಿಲ್ಲ.