ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ಬಳಿ ಅರ್ಧ ಕೆ.ಜಿಯಷ್ಟು ಉನ್ನತ ದರ್ಜೆಯ ಮಾದಕ ವಸ್ತುವನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಪಾಕ್ ನಿರ್ಮಿತ ಕ್ವಾಡ್‌ಕಾಪ್ಟರ್ (ಹೆಲಿಕಾಪ್ಟರ್ ಮಾದರಿ ಡ್ರೋನ್ ಸಾಧನ) ಅನ್ನು ಶನಿವಾರ ರಾತ್ರಿ ಅರ್ನಿಯಾ ಸೆಕ್ಟರ್‌ನಲ್ಲಿರುವ ಚೈನಾಜ್ ಬಾರ್ಡರ್ ಔಟ್‌ಪೋಸ್ಟ್ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ ರಾತ್ರಿ 8.10ರ ಸುಮಾರಿಗೆ 495 ಗ್ರಾಂ ತೂಕದ ಉನ್ನತ ದರ್ಜೆಯ ಮಾದಕ ದ್ರವ್ಯದೊಂದಿಗೆ ಪಾಕ್ ನಿರ್ಮಿತ ಡ್ರೋನ್ ಅನ್ನು ಹೊಡೆದುರುಳಿಸುವ ಮೂಲಕ ಮಾದಕ ವಸ್ತುಗ: ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಲಾಯಿತು ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಪಾಕಿಸ್ತಾನದ ಕಡೆಯಿಂದ ಉಗ್ರರ ಒಳನುಸುಳುವಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಇನ್ನೂ ಎರಡು ತುಕಡಿಗಳನ್ನು ಜಮ್ಮು ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಬಿಎಸ್‌ಎಫ್ ಹೇಳಿದೆ.
ಭಯೋತ್ಪಾದಕ ಚಟುವಟಿಕೆಗಳು ಈಚೆಗೆ ಹೆಚ್ಚುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಒಡಿಶಾದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದ ಎರಡು ತುಕಡಿಗಳನ್ನು ಜುಲೈ ಮತ್ತು ಆಗಸ್ಟ್‌ನಲ್ಲಿ ವಾಪಸ್ ಕರೆಸಿಕೊಳ್ಳಲಾಗಿತ್ತು. ಈಗ ಅವನ್ನು ಜಮ್ಮುಗೆ ಕಳುಹಿಸಲಾಗಿದೆ.