ಈ ವರದಿಯನ್ನು ಲೋಕಸಭಗೆ ಬುಧವಾರ ಸಲ್ಲಿಸಲಾಗಿದೆ. ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ಪತನ ದುರ್ಘಟನೆಯಲ್ಲಿ ಒಟ್ಟು 13 ಜನ ಮೃತಪಟ್ಟಿದ್ದರು.
2017ರಿಂದ 2022ರವರೆಗೆ ಭಾರತೀಯ ವಾಯು ಸೇನೆಯಲ್ಲಿ 34 ಅಪಘಾತಗಳು ಸಂಭವಿಸಿವೆ ಎಂದು 18ನೇ ಲೋಕಸಭೆಯ ರಕ್ಷಣಾ ಸ್ಥಾಯಿ ಸಮಿತಿ ವರದಿಯಲ್ಲಿ ಹೇಳಲಾಗಿದೆ. 2021-22ರಲ್ಲಿ ಒಟ್ಟು ಒಂಭತ್ತು ಅಪಘಾತಗಳು ಸಂಭವಿಸಿವೆ. 2021ರ ಡಿ. 8ರಂದು ಸಂಭವಿಸಿದ ಅಪಘಾತವು ವಿಮಾನ ಸಿಬ್ಬಂದಿಯಿಂದ ಆಗಿರುವ ಲೋಪವಾಗಿದೆ ಎಂದು ಹೇಳಲಾಗಿದೆ.
ಅಂದು ಹೆಲಿಕಾಪ್ಟರ್ ಚಾಲನೆ ಮಾಡುತ್ತಿದ್ದ ಪೈಲಟ್ ಅವರ ಲೋಪದಿಂದಾಗಿ ಹೆಲಿಕಾಪ್ಟರ್ ಪತನಗೊಂಡು ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ 13 ಜನರ ಸಾವಿಗೆ ಕಾರಣವಾಗಿತ್ತು. ಕಣಿವೆ ಪ್ರದೇಶದಲ್ಲಿ ಅನಿರೀಕ್ಷಿತ ಹವಾಮಾನ ಬದಲಾವಣೆ ಹಾಗೂ ಮೋಡದೊಳಗೆ ಹೆಲಿಕಾಪ್ಟರ್ ಪ್ರವೇಶಿಸಿದ್ದು ಈ ಅಪಘಾತಕ್ಕೆ ಕಾರಣ. ಇದರಿಂದಾಗಿ ಪೈಲಟ್ ಪ್ರಾದೇಶಿಕ ದಿಗ್ಭ್ರಮೆಗೆ ಒಳಗಾದ ಪರಿಣಾಮ ನಿಯಂತ್ರಣ ಕಳೆದುಕೊಂಡು ಹೆಲಿಕಾಪ್ಟರ್ ಭೂಮಿಗೆ ಅಪ್ಪಳಿಸಿತು. ಕಾಕ್‌ಪಿಟ್‌ನಲ್ಲಿ ದಾಖಲಾದ ಧ್ವನಿ ಹಾಗೂ ಹೆಲಿಕಾಪ್ಟರ್‌ನಿಂದ ಲಭ್ಯವಾದ ಮಾಹಿತಿಯನ್ನು ವಿಶ್ಲೇಷಿಸಿ ಮತ್ತು ಲಭ್ಯವಿದ್ದ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ಸೇನಾ ಸಿಬ್ಬಂದಿ ಕಾಲೇಜಿಗೆ ಜನರಲ್ ರಾವತ್, ಅವರ ಪತ್ನಿ ಮಧುಲಿಕಾ ಹಾಗೂ ಸೇನೆ 11 ಯೋಧರನ್ನು ಹೊತ್ತ ಎಂಐ-17 ವಿ5 ಹೆಲಿಕಾಪ್ಟರ್ ಸೂಲೂರು ವಾಯುಸೇನೆ ನೆಲೆಯಿಂದ ಹಾರಾಟ ಆರಂಭಿಸಿತ್ತು. ಲ್ಯಾಂಡ್ ಆಗುವ ಕೆಲವೇ ನಿಮಿಷಗಳ ಮೊದಲು ಅದು ಪತನಗೊಂಡಿತ್ತು.
ಜನರಲ್ ರಾವತ್, ಅವರ ಪತ್ನಿ ಹಾಗೂ ಸೇರಿದಂತೆ 12 ಜನ ಮೃತಪಟ್ಟಿದ್ದರು. ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ತೀವ್ರ ಸುಟ್ಟ ಗಾಯಗಳಿಂದ ಬದುಕುಳಿದಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನಲ್ಲಿರುವ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಕೆಲ ದಿನಗಳ ನಂತರ ಅವರೂ ಕೊನೆಯುಸಿರಿಳೆದಿದ್ದರು.