ಮುಂಬೈ: ನವಿ ಮುಂಬೈನ ರಸ್ತೆಯೊಂದರಲ್ಲಿ ವಾಗ್ವಾದ ನಡೆಸಿ, ವೈದ್ಯ ಹಾಗೂ ಇಬ್ಬರ ವಿರುದ್ಧ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) 10ರಿಂದ 15 ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
'ನವೆಂಬರ್ 29ರಂದು ಬೆಳಿಗ್ಗೆ 10.15ಕ್ಕೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಐಎಸ್‌ಎಫ್ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮುಂಬೈ ವಿಮಾನ ನಿಲ್ದಾಣದಿಂದ ಖಾರ್‌ಘರ್ ಪ್ರದೇಶದಲ್ಲಿರುವ ವಸತಿ ಸಮುಚ್ಛಯಕ್ಕೆ ಸಿಐಎಸ್‌ಎಫ್ ಸಿಬ್ಬಂದಿಯನ್ನು ಬಸ್ ಮೂಲಕ ಕರೆದೊಯ್ಯಲಾಗುತ್ತಿತ್ತು.
'ಸೆಕ್ಟರ್-36ರ ಉತ್ಸವ್ ಚೌಕ್ ಹಾಗೂ ಸೆಂಟ್ರಲ್ ಪಾರ್ಕ್‌ನ ಮಧ್ಯಭಾಗದಲ್ಲಿ ವೇಗವಾಗಿ ಬಸ್ ಸಾಗುತ್ತಿದ್ದ ವೇಳೆ ಸನಿಹದಲ್ಲಿದ್ದ ಕಾರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದೆ. ಇದರಿಂದ ಸಿಟ್ಟಿಗೆದ್ದ ಕಾರು ಚಲಾಯಿಸುತ್ತಿದ್ದ ವೈದ್ಯರು, ಬಸ್ ಬೆನ್ನತ್ತಿ, ಅದನ್ನು ನಿಲ್ಲಿಸಿ, ಬಸ್ ಚಾಲಕನ ಅಜಾಗರೂಕತೆಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಎರಡೂ ಕಡೆಯಿಂದ ಮಾತಿನ ಚಕಮಕಿ ನಡೆದಿದೆ.
ಬಸ್ ಒಳಗಿದ್ದ ಐದರಿಂದ ಆರು ಸಿಐಎಸ್‌ಎಫ್ ಸಿಬ್ಬಂದಿ ಕೆಳಗಿಳಿದು ನನ್ನ ಹಾಗೂ ಸಹೋದರ, ಸ್ನೇಹಿತನ ಮೇಲೆ ಹಲ್ಲೆ ನಡೆಸಿ, ಕಾರಿನ ಗಾಜು ಒಡೆದು ಹಾಕಿದ್ದಾರೆ. ಹಲ್ಲೆ ನಡೆಸಿದ್ದ ವೇಳೆ ಸಿಐಎಸ್‌ಎಫ್ ಸಿಬ್ಬಂದಿ ಪಾನಮತ್ತರಾಗಿದ್ದರು. ಘಟನೆ ನಡೆದ ನಂತರ ಅಲ್ಲಿಂದ ಪರಾರಿಯಾದರು' ಎಂದು ವೈದ್ಯರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
'ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಎಸ್‌ಎಫ್‌ನ 10ರಿಂದ 15 ಮಂದಿ ವಿರುದ್ಧ ಬಿಎನ್‌ಎಸ್‌ನ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನೋಟಿಸ್ ಜಾರಿ ಮಾಡಲಾಗಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.