ನವದೆಹಲಿ: ದಕ್ಷಿಣ ದೆಹಲಿಯ ಮಾಳವೀಯಾ ನಗರದಲ್ಲಿ ರ‍್ಯಾಲಿ ನಡೆಸುತ್ತಿದ್ದ ಎಎಪಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರ ಮೇಲೆ ದ್ರವ ಎರಚಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇಜ್ರಿವಾಲ್ ಅವರು ಭದ್ರತಾ ಸಿಬ್ಬಂದಿಯ ಹಿಂದಿದ್ದ ಜನರತ್ತ ಕೈಬೀಸುತ್ತಿದ್ದ ವೇಳೆ ಹತ್ತಿರ ಬಂದ ವ್ಯಕ್ತಿಯೊಬ್ಬ ಕೇಜ್ರಿವಾಲ್ ಮೇಲೆ ಆ ವ್ಯಕ್ತಿ ದ್ರವ ಎರಚಿದ್ದಾನೆ.
ತಕ್ಷಣ ಭದ್ರತಾ ಸಿಬ್ಬಂದಿ ಆತನನ್ನು ತಡೆದರು. ನಂತರ ಕೇಜ್ರಿವಾಲ್ ಮತ್ತು ಅವರ ಜೊತೆಗಿದ್ದ ಭದ್ರತಾ ಸಿಬ್ಬಂದಿ ಮುಖವನ್ನು ಒರೆಸಿಕೊಳ್ಳುತ್ತಿದ್ದುದು ಕಂಡುಬಂತು.
ಅದೇ ಪ್ರದೇಶದ ನಿವಾಸಿಯಾಗಿರುವ ಆ ವ್ಯಕ್ತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಎಪಿ, 'ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಸಂಪೂರ್ಣ ಹದಗೆಟ್ಟಿದೆ' ಎಂದು ಆರೋಪಿಸಿದೆ.
'ರಾಷ್ಟ್ರ ರಾಜಧಾನಿಯಲ್ಲಿ ಮಾಜಿ ಮುಖ್ಯಮಂತ್ರಿಗೆ ಸುರಕ್ಷತೆ ಇಲ್ಲವೆಂದರೆ ಜನಸಾಮಾನ್ಯರ ಗತಿ ಏನು'? ಎಂದು ಎಎಪಿ ಆಕ್ರೋಶ ವ್ಯಕ್ತಪಡಿಸಿದೆ.
ದೆಹಲಿ ಪೊಲೀಸ್ ಇಲಾಖೆಯು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದೆ.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರು ಮಾಳವೀಯ ನಗರದ ಸಾವಿತ್ರಿ ನಗರದಲ್ಲಿ ರ‍್ಯಾಲಿ ನಡೆಸುತ್ತಿದ್ದರು.
ಬಿಜೆಪಿ ಕಾರ್ಯಕರ್ತನಿಂದ ದಾಳಿ: ಆತಿಶಿ ಆರೋಪ
'ಬಿಜೆಪಿ ಕಾರ್ಯಕರ್ತ ಹಗಲಿನಲ್ಲೇ ಕೇಜ್ರಿವಾಲ್ ಅವರ ಮೇಲೆ ದಾಳಿ ಮಾಡಿದ್ದಾನೆ. ಬಿಜೆಪಿಯು ಮೂರನೇ ಬಾರಿಯೂ ದೆಹಲಿಯಲ್ಲಿ ಚುನಾವಣೆ ಸೋಲುವ ಭೀತಿಯಲ್ಲಿದೆ' ಎಂದು ದೆಹಲಿ ಮುಖ್ಯಮಂತ್ರಿ ಎಎಪಿ ನಾಯಕಿ ಆತಿಶಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ಕೇಜ್ರಿವಾಲ್ ಮೇಲೆ ದಾಳಿ ನಡೆಸಿದ ವ್ಯಕ್ತಿ ಬಿಜೆಪಿ ಜತೆ ನೇರ ನಂಟು ಹೊಂದಿದ್ದಾನೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಜ್ 'ಎಕ್ಸ್'ನಲ್ಲಿ ತಿಳಿಸಿದ್ದಾರೆ. ಇದೇ ರೀತಿಯ ದಾಳಿಗಳು ಅ. 25ರಂದು ವಿಕಾಸಪುರಿಯಲ್ಲಿ ಹಾಗೂ ನ. 27ರಂದು ನಂಗ್ಲೋಯ್‌ಯಲ್ಲಿ ನಡೆದಿದ್ದವು ಎಂದು ಎಎಪಿ ತಿಳಿಸಿದೆ.