ಚೆನ್ನೈ: ಕೇರಳ, ತಮಿಳುನಾಡಿನಲ್ಲಿ ವ್ಯಾಪಕ ಹಾನಿ ಮಾಡಿದ್ದ ಫೆಂಗಲ್ ಚಂಡಮಾರುತ ಬಂದು-ಹೋದ ಕೆಲವೇ ದಿನಗಳ ಅಂತರದಲ್ಲಿ ಮತ್ತೆ ಬಂಗಾಳಕೊಲ್ಲಿ ವಾಯುಭಾರ ಕುಸಿತವಾಗಿ ಚಂಡಮಾರುತ ಸೃಷ್ಟಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಫೆಂಗಲ್ ಚಂಡಮಾರುತದಿಂದ ತಮಿಳುನಾಡು ಮತ್ತು ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಹಲವಾರು ಅವಾಂತರ ಸೃಷ್ಟಿಯಾಗಿತ್ತು. ಇದೀಗ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗುತ್ತಿದ್ದು, ಮತ್ತೆ ಆತಂಕ ಶುರುವಾಗಿದೆ.
ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾಗಿದ್ದು, ಮತ್ತೊಂದು ಚಂಡಮಾರುತ ಸೃಷ್ಟಿಯಾಗುವ ಭೀತಿ ಎದುರಾಗಿದೆ. ಈ ಬಾರಿ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ತಮಿಳುನಾಡು ಮತ್ತು ಶ್ರೀಲಂಕಾ ಕರಾವಳಿ ಪ್ರದೇಶದಲ್ಲಿ ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಲಿಸಿದರೆ ವಾಯುಭಾರ ಕುಸಿತದ ಲಕ್ಷಣಗಳು ಗೋಚರಿಸುತ್ತಿದ್ದು, ಇದು ಮೋಡ ಕವಿದ ವಾತಾವರಣ, ಮಳೆ ಚಟುವಟಿಕೆಗೆ ನಾಂದಿಯಾಗುತ್ತಿದೆ ಎನ್ನಲಾಗಿದೆ.
ಡಿಸೆಂಬರ್ 10ರಂದು ಮಾಡಲಾದ ಮಾಪನದಂತೆ ಸಮುದ್ರ ಮಟ್ಟದಿಂದ 5.8 ಕಿ.ಮೀ.ವರೆಗೆ ವಿಸ್ತರಿಸಿರುವ ಕಡಿಮೆ ಒತ್ತಡದ ಪ್ರದೇಶ ಮತ್ತು ಅದಕ್ಕೆ ಸಂಬಂಧಿಸಿದ ಚಂಡಮಾರುತದ ಪರಿಚಲನೆಯು ಮಂಗಳವಾರದ ವೇಳೆಗೆ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಂತೆಯೇ ಇದು ನಂತರ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆ ಇದ್ದು, ಶ್ರೀಲಂಕಾ-ತಮಿಳುನಾಡು ಕರಾವಳಿಯ ನೈಋತ್ಯ ಬಂಗಾಳಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.