ತಿರುವನಂತಪುರ: ಕೇರಳದ ಮಲಪ್ಪುರಂನ ಜಿಲ್ಲಾಧಿಕಾರಿ ಹೆಸರಿನಲ್ಲಿ ಸುಳ್ಳು ರಜಾ ಸಂದೇಶದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
17 ವರ್ಷದ ಬಾಲಕನನ್ನು ತಿರುನಾವಾಯದ ವೈರಂಕೋಡ್ ಮೂಲದವರು ಎಂದು ಗುರುತಿಸಲಾಗಿದೆ.
'ಭಾರಿ ಮಳೆಯಿಂದಾಗಿ ಡಿ.3ರಂದು ಮಲಪ್ಪುರಂನಲ್ಲಿ ವೃತ್ತಿಪರ ಕಾಲೇಜುಗಳನ್ನು ಹೊರತುಪಡಿಸಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ' ಎಂದು ನಕಲಿ ರಜಾ ಸಂದೇಶದ ಪತ್ರವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಅಪರಾಧ ವಿಭಾಗದ ಪೊಲೀಸರು ಹುಡುಕಾಟ ನಡೆಸಿದ ಬಳಿಕ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಬಾಲಕ ಹಾಗೂ ಆತನ ಪೋಷಕರನ್ನು ಜಿಲ್ಲಾ ಅಪರಾಧ ವಿಭಾಗದ ಕಚೇರಿಗೆ ಕರೆಸಿ, ಅವರೊಂದಿಗೆ ಪೊಲೀಸರು ಮಾತುಕತೆ ನಡೆಸಿದರು. ಈ ವೇಳೆ ಪೊಲೀಸರು ಬಾಲಕನಿಗೆ ಅಗತ್ಯ ಸಲಹೆಗಳನ್ನು ನೀಡಿದರು. ಬಂಧನದಿಂದ ಆತನನ್ನು ಬಿಡುಗಡೆಗೊಳಿಸಲಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.