ನವದೆಹಲಿ: ಎಲೆಕ್ಟ್ರಾನಿಕ್ ಮತ ಯಂತ್ರಗಳ ವಿಶ್ವಾಸಾರ್ಹತೆಯ ಬಗ್ಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿರುವಂತೆಯೇ ಇತ್ತ ಟಿಎಂಸಿ ಈ ವಿಚಾರವಾಗಿ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದೆ.
ಹೌದು.. ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತುತ್ತಿರುವಂತೆಯೇ ಇದಕ್ಕೆ ಭಿನ್ನವಾಗಿ ನಿಲವು ತಳೆದಿರುವ ತೃಣಮೂಲ ಕಾಂಗ್ರೆಸ್ 'EVM ಹ್ಯಾಕ್ ಮಾಡಿ ತೋರಿಸಿ' ಎಂದು ಸವಾಲೆಸೆದಿದೆ. ಟಿಎಂಸಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೋಮವಾರ ಈ ವಿಷಯದ ಬಗ್ಗೆ ಕಾಂಗ್ರೆಸ್ ಜೊತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇವಿಎಂಗಳ ಮೇಲಿನ ಆರೋಪಗಳು ಆಗಿದ್ದಾಂಗ್ಗೆ ಕೇಳಿಬರುತ್ತಿವೆಯಾದರೂ ಅಂತಹ ಆರೋಪಗಳು ಈ ವರೆಗೂ ಸಾಬೀತಾಗಿಲ್ಲ. ಆರೋಪಗಳನ್ನು ಮಾಡುವ ಜನರು ಇವಿಎಂಗಳನ್ನು ಹೇಗೆ "ಹ್ಯಾಕ್" ಮಾಡಬಹುದು ಎಂಬುದನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
"ಇವಿಎಂ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಜನರು, ಅವರ ಬಳಿ ಏನಾದರೂ ಸಾಕ್ಷಿಗಳು ಇದ್ದರೆ ಅವರು ಚುನಾವಣಾ ಆಯೋಗಕ್ಕೆ ಹೋಗಿ ಡೆಮೊ ತೋರಿಸಬೇಕು. ಇವಿಎಂ ಯಾದೃಚ್ಛೀಕರಣದ ಸಮಯದಲ್ಲಿ ಕೆಲಸ ಸರಿಯಾಗಿ ನಡೆದರೆ ಮತ್ತು ಬೂತ್‌ನಲ್ಲಿ ಕೆಲಸ ಮಾಡುವ ಜನರು ಅಣಕು ಮತದಾನ ಮತ್ತು ಎಣಿಕೆಯ ಸಮಯದಲ್ಲಿ ಪರಿಶೀಲಿಸಿದರೆ, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಾನು ಭಾವಿಸುತ್ತೇನೆ" ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.