ಪುಣೆ: ಮುಂಬರುವ ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸುವ ನಿರ್ಣಯವನ್ನು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋಲೆವಾಡಿ ಗ್ರಾಮಸಭೆ ಮಂಗಳವಾರ ಅಂಗೀಕರಿಸಿದೆ. ಇದರೊಂದಿಗೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ರಾಜ್ಯದ ಎರಡನೇ ಗ್ರಾಮ ಇದಾಗಿದೆ.
ಕೋಲೆವಾಡಿ ಗ್ರಾಮವು ಕರಾಡ್ (ದಕ್ಷಿಣ) ವಿಧಾನಸಭೆ ಕ್ಷೇತ್ರದಲ್ಲಿ ಬರುತ್ತದೆ. ಈ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ಅವರು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪೃಥ್ವಿರಾಜ್ ಅವರು ಬಿಜೆಪಿ ಅಭ್ಯರ್ಥಿ ಅತುಲ್ ಭೋಸ್ಲೆ ವಿರುದ್ಧ 39,355 ಮತಗಳಿಂದ ಸೋತಿದ್ದರು.
ಇವಿಎಂ ಮೂಲಕ ಚಲಾವಣೆಯಾದ ಮತಗಳ ಬಗ್ಗೆ ಕೋಲೆವಾಡಿ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ ಕಾರಣ ಮುಂಬರುವ ಚುನಾವಣೆಗಳಲ್ಲಿ ಮತಪತ್ರ ಬಳಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಕೆಲವು ದಿನಗಳ ಹಿಂದೆ ಸೊಲ್ಲಾಪುರದ ಮಲ್ಶಿರಸ್ ಕ್ಷೇತ್ರದ ಮರ್ಕಡವಾಡಿಯ ಗ್ರಾಮಸ್ಥರು ಇವಿಎಂಗಳ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತಪತ್ರ ಬಳಸಿ ಮರು ಮತದಾನ ನಡೆಸಲು ಪ್ರಯತ್ನಿಸಿದ್ದರು.
ಮುಂಬರುವ ಚುನಾವಣೆಗಳಲ್ಲಿ ಇವಿಎಂ ಇಲ್ಲದೆಯೇ ಮತಪತ್ರ ಮೂಲಕ ಮತದಾನ ನಡೆಸಬೇಕು ಎಂದು ಕೋಳೆವಾಡಿ ಗ್ರಾಮಸಭೆ ನಿರ್ಣಯ ಅಂಗೀಕರಿಸಿದೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮತಪತ್ರ ಬಳಸಲು ಅನುಮತಿ ನೀಡಬೇಕು. ಮತಪತ್ರ ಬಳಸಿದರೆ ಮಾತ್ರ ಕೋಲೆವಾಡಿಯ ಜನರು ಮತ ಹಾಕುತ್ತಾರೆ ಎಂದು ಸಂಕಲ್ಪ ಮಾಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ಇವಿಎಂ ಬಳಸಿದರೆ ನಾವು ಮತ ಹಾಕುವುದಿಲ್ಲ ಎಂದು ಅವರು ಹೇಳಿದ್ದಾರೆ.
ಮತಪತ್ರಗಳ ಮೂಲಕ ಮತದಾನ ಮಾಡಲು ನಮಗೆ ಅವಕಾಶ ನೀಡದಿದ್ದರೆ, ನಾವು ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.