ಚೆನ್ನೈ: ತಮಿಳುನಾಡು ಮತ್ತು ಪುದುಚೇರಿಗೆ ಅಪ್ಪಳಿಸಿರುವ ಫೆಂಗಲ್ ಚಂಡಮಾರುತದ ಅಬ್ಬರ ಜೋರಾಗಿದ್ದು, ತಮಿಳುನಾಡಿನಲ್ಲಿ ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ.
ಸೋಮವಾರವೂ ತಮಿಳುನಾಡಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಕೂಡ ಮುಂದುವರೆದಿದೆ.
ಭಾರೀ ಮಳೆ ಮತ್ತು ಪ್ರವಾಹಗಳು ತಮಿಳುನಾಡು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಅಧಿಕಾರಿಗಳಿಗೆ ಪರಿಹಾರ ಕಾರ್ಯವೇ ತಲೆನೋವಾಗಿ ಪರಿಣಮಿಸಿದೆ.
ಒಂದೆಡೆ ಮಳೆ, ಭೂಕುಸಿತದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದರೆ, ಮತ್ತೊಂದೆಡೆ ಭಾರಿ ಪ್ರವಾಹ ಕೂಡ ಇನ್ನಿಲ್ಲದಂತೆ ಜನರನ್ನು ಕಾಡುತ್ತಿದೆ.
ಈ ನಡುವೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಭಾರಿ ಮಳೆಯಾಗಿದ್ದು, ತಮಿಳುನಾಡಿನಲ್ಲಿ ಅತೀ ಹೆಚ್ಚು ಹಾನಿಗೊಳಗಾದ ಪ್ರದೇಶ ಇದಾಗಿದೆ. ಇಲ್ಲಿ ಭಾರಿ ಪ್ರವಾಹ ಏರ್ಪಟ್ಟಿದ್ದು, ಹಲವಾರು ವಾಹನಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.
ಕೃಷ್ಣಗಿರಿಯ ಉತ್ತಂಗಿರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಹಲವು ಬಸ್ ಗಳು ಮತ್ತು ಕಾರುಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಕೆಲವು ಬಸ್ಸುಗಳು ಮತ್ತು ಕಾರುಗಳು ವೇಗವಾಗಿ ಹರಿಯುವ ಪ್ರವಾಹದಲ್ಲಿ ನಿಧಾನವಾಗಿ ಕೊಚ್ಚಿಹೋಗುವುದನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಅಧಿಕಾರಿಗಳ ಪ್ರಕಾರ, ಕೃಷ್ಣಗಿರಿ ಜಿಲ್ಲೆಯಲ್ಲಿ ಸತತ 14 ಗಂಟೆಗಳ ಕಾಲ ಭಾರೀ ಮಳೆಯಾಗಿದ್ದು, ಉತ್ತಂಗರೈ ಪ್ರದೇಶದಲ್ಲಿ ಕಳೆದ ರಾತ್ರಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಇದು ಇಲ್ಲಿ ಪ್ರವಾಹಕ್ಕೆ ಕಾರಣ ಎನ್ನಲಾಗಿದೆ.
ಇನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸುದ್ದಿಗಾರರೊಂದಿಗೆ ಮಾತನಾಡಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. 'ರಾಜ್ಯದಾದ್ಯಂತ 7,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು 147 ಆಶ್ರಯ ಶಿಬಿರಗಳ್ನು ತೆರೆದು ಆಶ್ರಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಂತೆಯೇ ಪುದುಚೇರಿಯಲ್ಲಿ, ಕೃಷ್ಣನಗರದ ಕೆಲವು ಪ್ರದೇಶಗಳಲ್ಲಿ ನೀರಿನ ಮಟ್ಟವು ಸುಮಾರು ಐದು ಅಡಿಗಳಿಗೆ ಏರಿದ್ದು, ಸುಮಾರು 500 ಮನೆಗಳ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಅದರಲ್ಲಿ 100 ಕ್ಕೂ ಹೆಚ್ಚು ಜನರನ್ನು ಭಾರತೀಯ ಸೇನೆ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.