ಚಂಢಿಗಡ್: ಸಿಖ್ ಸಮುದಾಯದ 'ಸುಪ್ರೀಂ ಕೋರ್ಟ್' ಅಂದರೆ ಶ್ರೀ ಅಕಾಲ್ ತಖ್ತ್ ಸಾಹಿಬ್ ಸೋಮವಾರ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್‌ಗೆ ಧಾರ್ಮಿಕ ಶಿಕ್ಷೆ ವಿಧಿಸಿತ್ತು. ಅಮೃತಸರದ ಗುರುದ್ವಾರ ಸಾಹಿಬ್‌ನಲ್ಲಿ ಪಾತ್ರೆಗಳನ್ನು ತೊಳೆಯುವುದು ಸೇರಿದಂತೆ ಇತರ ಧಾರ್ಮಿಕ ಶಿಕ್ಷೆಗಳನ್ನು ಸಹ ಸುಖಬೀರ್ ಎದುರಿಸಬೇಕಾಗಿತ್ತು. ಅದರಂತೆ ಇಂದಿನಿಂದ ಸುಖ್‌ಬೀರ್ ಸೇವಾದಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
62 ವರ್ಷದ ಸುಖ್‌ಬೀರ್ ಸಿಂಗ್ ಬಾದಲ್ ಅವರು ಇಂದಿನಿಂದ ಕೈಯಲ್ಲಿ ಈಟಿಯೊಂದಿಗೆ ಸೈನಿಕನ ಸಮವಸ್ತ್ರದಲ್ಲಿ ಗಾಲಿಕುರ್ಚಿಯ ಮೇಲೆ ಕುಳಿತಿದ್ದರು. ಹಲವಾರು ಇತರ ಅಕಾಲಿ ನಾಯಕರು, ಹೆಚ್ಚಾಗಿ ಮಾಜಿ ಕ್ಯಾಬಿನೆಟ್ ಮಂತ್ರಿಗಳು, ದೇವಾಲಯದ ಆವರಣದಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸಿದರು ಮತ್ತು ನಂತರ ಲಂಗರ್ನಲ್ಲಿ ಪಾತ್ರೆಗಳನ್ನು ತೊಳೆಯುವ ಮೂಲಕ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದರು. ಅಕಾಲ್ ತಖ್ತ್ ಈ ಹಿಂದೆ ಬಾದಲ್‌ಗೆ ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತೆ ಶಿಕ್ಷೆ ವಿಧಿಸಿತ್ತು. ಆದರೆ ಕಳೆದ ತಿಂಗಳು ಅವರು ಕಾಲು ಮುರಿದಿದ್ದನ್ನು ಪರಿಗಣಿಸಿ, ಅವರ ಶಿಕ್ಷೆಯನ್ನು ಮಾರ್ಪಡಿಸಲಾಗಿದೆ.
ಬಾದಲ್ ಮತ್ತು ದಿಂಡಾ ಬುಧವಾರವೂ ಗೋಲ್ಡನ್ ಟೆಂಪಲ್ ಹೊರಗೆ ತಮ್ಮ ಶಿಕ್ಷೆಯನ್ನು ಮುಂದುವರಿಸಲಿದ್ದಾರೆ. ಇತರ ನಾಯಕರು ತಮ್ಮ ನಿವಾಸದ ಸಮೀಪವಿರುವ ಗುರುದ್ವಾರದಲ್ಲಿ ಶಿಕ್ಷೆಯನ್ನು ಮುಂದುವರಿಸಬೇಕಾಗುತ್ತದೆ. SAD-ಬಿಜೆಪಿ ಸರ್ಕಾರದ ಸಿಖ್ ಮಂತ್ರಿಗಳು ಮತ್ತು ಪಕ್ಷದ ಕೋರ್ ಕಮಿಟಿ ಸದಸ್ಯರು 2007 ರಿಂದ 2017 ರವರೆಗೆ SAD ಅಧಿಕಾರಾವಧಿಯಲ್ಲಿ 'ವಿವಾದಾತ್ಮಕ' ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಸಿಖ್ ಪಂಥಕ್ಕೆ ಹಾನಿ ಮಾಡಿದ ಮತ್ತು ಧಾರ್ಮಿಕ ದುರ್ವರ್ತನೆಗಾಗಿ ಬಾದಲ್ ತಪ್ಪಿತಸ್ಥರೆಂದು ಆಗಸ್ಟ್ 30 ರಂದು ಘೋಷಿಸಲಾಗಿತ್ತು. ಆದರೆ ಶಿಕ್ಷೆ ನೀಡಿರಲಿಲ್ಲ.
ಗಿಯಾನಿ ರಘ್‌ಬೀರ್ ಸಿಂಗ್ ಅವರು ಅಕಾಲ್ ತಖ್ತ್‌ನ ವೇದಿಕೆಯಿಂದ 'ತಪ್ಪಿತಸ್ಥ' ಅಕಾಲಿ ದಳದ ನಾಯಕರಾದ ಸುಖಬೀರ್ ಬಾದಲ್, ಸುಖದೇವ್ ಧಿಂಡ್ಸಾ, ಗುಲ್ಜಾರ್ ಸಿಂಗ್ ರಾಣಿಕೆ ಮತ್ತು ಜನ್ಮೇಜಾ ಸೆಖೋನ್ ಅವರು 'ಸೇವಾದಾರ್' ಸಮವಸ್ತ್ರವನ್ನು ಧರಿಸಿ ಪ್ರಾಯಶ್ಚಿತ್ತವಾಗಿ ಪಾತ್ರೆಗಳು ಮತ್ತು ಬೂಟುಗಳನ್ನು ಸ್ವಚ್ಛಗೊಳಿಸುವ 'ಸೇವೆ' ಮಾಡಲು ಆದೇಶಿಸಿದ್ದಾರೆ.
ಸಿಖ್ಖರ ಸರ್ವೋಚ್ಚ ಧಾರ್ಮಿಕ ಸಂಸ್ಥೆಯಾದ ಅಕಾಲ್ ತಖ್ತ್, ಮಾಜಿ ಮುಖ್ಯಮಂತ್ರಿ ದಿವಂಗತ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ನೀಡಲಾಗಿದ್ದ 'ಪಂಥ್ ರತನ್ ಫಖ್ರ್-ಎ-ಕ್ವಾಮ್' ಎಂಬ ಬಿರುದನ್ನು ಕೂಡ ಹಿಂತೆಗೆದುಕೊಂಡಿದೆ. ಧರ್ಮನಿಂದನೆ ಪ್ರಕರಣದ ಆರೋಪಿಯಾಗಿರುವ ಸ್ವಯಂ ಘೋಷಿತ ದೇವಮಾನವ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಕ್ಷಮಾದಾನ ನೀಡಿದ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿದೆ.