ನವದೆಹಲಿ: ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರನ್ನು ವಾಗ್ದಂಡನೆಗೆ ಗುರಿಪಡಿಸುವಂತೆ ವಿರೋಧ ಪಕ್ಷಗಳ ಹಲವು ಸದಸ್ಯರು ಶುಕ್ರವಾರ ರಾಜ್ಯಸಭೆಯಲ್ಲಿ ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಪಿಲ್ ಸಿಬಲ್, ವಿವೇಕ್ ಟಂಖಾ, ದಿಗ್ವಿಜಯ ಸಿಂಗ್, ಜಾನ್ ಬ್ರಿಟ್ಟಾಸ್, ಮನೋಜ್ ಕುಮಾರ್ ಝಾ ಮತ್ತು ಸಾಕೇತ್ ಗೋಖಲೆ ಸೇರಿದಂತೆ 55 ಸಂಸದರು ವಾಗ್ದಂಡನೆ ನೋಟಿಸ್‌ಗೆ ಸಹಿ ಹಾಕಿದ್ದಾರೆ.
ಸಂಸದರು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿಯನ್ನು ಭೇಟಿಯಾಗಿ ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನ್ಯಾಯಮೂರ್ತಿ ಯಾದವ್ ಅವರು ಮಾಡಿದ ಭಾಷಣವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಅವರ ದ್ವೇಷಪೂರಿತ ಭಾಷಣ ಕೋಮು ಸೌಹಾರ್ದತೆಗೆ ಪ್ರಚೋದನೆ ನೀಡುತ್ತಿದೆ. ಅವರು ಮಾಡಿದ ಭಾಷಣದಲ್ಲಿನ ಮಾತುಗಳು ಕಳವಳ ಮೂಡಿಸುವಂತಹವು. ಆ ಮಾತುಗಳಲ್ಲಿ ಆಳವಾದ ಪೂರ್ವಗ್ರಹಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಕುರಿತ ದ್ವೇಷ ಕಾಣಿಸುತ್ತಿವೆ ಎಂದು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಮೂರ್ತಿ ಯಾದವ್ ಹೇಳಿದ್ದೇನು?
ಡಿಸೆಂಬರ್ 8 ರಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶೇಖರ್ ಕುಮಾರ್ ಯಾದವ್ 'ಇದು ಹಿಂದೂಸ್ತಾನ ಎಂದು ಹೇಳುವಲ್ಲಿ ನನಗೆ ಯಾವ ಅಳುಕೂ ಇಲ್ಲ; ಹಿಂದೂಸ್ತಾನದಲ್ಲಿ ಇರುವ ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ಈ ದೇಶ ವರ್ತಿಸುತ್ತದೆ. ಇದು ಕಾನೂನು' ಎಂದು ಹೇಳಿದ್ದರು.