ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಚಾಲ್ತಿಯಲ್ಲಿರುವಂತೆಯೇ ಇಬ್ಬರೂ ಬದ್ಧ ವೈರಿಗಳು ಭಾರತಕ್ಕಾಗಿ ಒಗ್ಗೂಡಿದ ಅಪರೂಪದ ಘಟನೆ ನಡೆದಿದೆ.
ಹೌದು.. ರಷ್ಯಾ ಮತ್ತು ಉಕ್ರೇನ್ ನಡುವಿನ ವರ್ಷಗಳ ಸುದೀರ್ಘ ಯುದ್ಧದ ಹೊರತಾಗಿಯೂ, ಮಾಸ್ಕೋ ಮತ್ತು ಕೀವ್ ಭಾರತಕ್ಕಾಗಿ ಯುದ್ಧನೌಕೆ ನಿರ್ಮಾಣಕ್ಕಾಗಿ ಒಟ್ಟಾಗಿ ಸೇರಿದೆ.
ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉನ್ನತ ಮಟ್ಟದ ಭೇಟಿಗಾಗಿ ಮಾಸ್ಕೋಗೆ ಆಗಮಿಸುತ್ತಿದ್ದಂತೆ ಸೋಮವಾರ ರಷ್ಯಾ-ಉಕ್ರೇನ್ ಜಂಟಿ ನಿರ್ಮಿತ ಯುದ್ಧ ನೌಕೆಯನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಯುದ್ಧನೌಕೆ INS ತುಶಿಲ್ ವಿತರಣೆ ಕಾರ್ಯಕ್ರಮದಲ್ಲಿ ರಷ್ಯಾ ಮತ್ತು ಉಕ್ರೇನ್ ಪ್ರತಿನಿಧಿಗಳು ಹಾಜರಿದಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. 2016ರಲ್ಲಿ ಭಾರತ ಸರ್ಕಾರ 2 ಯುದ್ಧನೌಕೆಗಾಗಿ ಆರ್ಡರ್ ಮಾಡಿತ್ತು. ಇದು ರಷ್ಯಾ ನಿರ್ಮಿತ ಕ್ರಿವಾಕ್ III-ವರ್ಗದ ಯುದ್ಧನೌಕೆಯಾಗಿದ್ದು, ಇದು ಸುಧಾರಿತ ಸ್ಟೆಲ್ತ್ ಮಿಸೈಲ್ ಫ್ರಿಗೇಟ್ ಆಗಿದೆ. ಭಾರತವು ಪ್ರಸ್ತುತ ಇಂತಹ ಆರು ಯುದ್ಧನೌಕೆಗಳನ್ನು ನಿರ್ವಹಿಸುತ್ತಿದೆ.
ಅಲ್ಲದೆ ರಷ್ಯಾದಲ್ಲಿ ತಯಾರಾಗುತ್ತಿರುವ ಎರಡು ಹಡಗುಗಳು ಮಾತ್ರವಲ್ಲದೆ, ಇದೇ ರೀತಿಯ ಇನ್ನೂ ಎರಡು ಹಡಗುಗಳನ್ನು ಭಾರತದಲ್ಲಿ ಕೂಡ ತಯಾರಿಸಲು ಆದೇಶಿಸಲಾಗಿದೆ. ಭಾರತದ ಗೋವಾ ಶಿಪ್‌ಯಾರ್ಡ್‌ನಲ್ಲಿ ಈ ಹಡಗುಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.