ಛತ್ರಪತಿ ಸಂಭಾಜಿನಗರ: ಪೊಲೀಸ್ ಅಧಿಕಾರಿಗಳು ಸಂವಿಧಾನಕ್ಕೆ ನಿಷ್ಠರಾಗಿರಬೇಕು. ಆಡಳಿತದಲ್ಲಿರುವ ನಾಯಕರಿಗಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿ ಮೀರನ್ ಚಾಧ ಬೊರ್ವಾಂಕರ್ ಕಿವಿಮಾತು ಹೇಳಿದ್ದಾರೆ.
ಮೀರನ್ ಅವರಿಗೆ 'ಅನಂತ್ ಭಾಲೇರಾವ್ ಸ್ಮಾರಕ ಪ್ರಶಸ್ತಿ'ಯನ್ನು ನಗರದಲ್ಲಿ ಭಾನುವಾರ ಪ್ರದಾನ ಮಾಡಲಾಯಿತು.
ಬಳಿಕ ಮಾತನಾಡಿರುವ ಅವರು, 'ಪೊಲೀಸ್ ಅಧಿಕಾರಿಗಳ ನಿಷ್ಠೆಯು ಆಡಳಿತದ ಪ್ರಮುಖ ಸಾಧನವಾಗಿರುವ ಸಂವಿಧಾನಕ್ಕೆ ಇರಬೇಕೇ ಹೊರತು, ಆಡಳಿತ ನಡೆಸುವ ನಾಯಕರಿಗೆ ಅಲ್ಲ' ಎಂದಿದ್ದಾರೆ.
ಪ್ರಶಸ್ತಿಯೊಂದಿಗೆ ತಮಗೆ ನೀಡಲಾದ ₹ 50,000 ನಗದನ್ನು ಪೊಲೀಸ್ ಫೌಂಡೇಷನ್‌ಗೆ ನೀಡುವುದಾಗಿ ಘೋಷಿಸಿದ ಅವರು, ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರು ಹಾಗೂ ನ್ಯಾಯಾಧೀಶರು ಇರದಿದ್ದರೆ, ಅಪರಾಧ ಪ್ರಕರಣಗಳು ಏರಿಕೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ಒಂದು ಲಕ್ಷ ಜನಸಂಖ್ಯೆಗೆ 220 ಪೊಲೀಸ್ ಅಧಿಕಾರಿಗಳು ಇರಬೇಕು. ಆದರೆ, ಭಾರತದಲ್ಲಿ 153 ಮಂದಿಯಷ್ಟೇ ಇದ್ದಾರೆ. ಅವರೆಲ್ಲ ವಾರದ ರಜೆಯನ್ನೂ ತೆಗೆದುಕೊಳ್ಳದೆ, ನಿತ್ಯ 11 ಗಂಟೆ ಕೆಲಸ ಮಾಡುತ್ತಾರೆ. ನ್ಯಾಯವಾಗಿ ಅವರು 8 ಗಂಟೆ ಕೆಲಸ ಮಾಡಬೇಕು. ಪರಿಸ್ಥಿತಿ ಹೀಗಿರುವಾಗ, ಅವರಿಂದ ಅತ್ಯುತ್ತಮ ಫಲಿತಾಂಶ ನಿರೀಕ್ಷಿಸುವುದು ಹೇಗೆ?' ಎಂದು ಕೇಳಿದ್ದಾರೆ.
10 ಲಕ್ಷ ಜನಸಂಖ್ಯೆಗೆ 50 ನ್ಯಾಯಾಧೀಶರು ಇರಬೇಕು. ಆದರೆ, ಆ ಸಂಖ್ಯೆಯು ಭಾರತದಲ್ಲಿ 21ರಷ್ಟಿದೆ ಎಂದ ಮೀರನ್, ಅಪರಾಧಿಗಳನ್ನು ಎನ್‌ಕೌಂಟರ್ ಮಾಡಿ ಕೊಲ್ಲುವುದೇ ಪರಿಹಾರವಲ್ಲ ಎಂದು ಇದೇ ವೇಳೆ ಪ್ರತಿಪಾದಿಸಿದ್ದಾರೆ. ಬದ್ಲಾಪುರದಲ್ಲಿ ಇಬ್ಬರು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಮುಖ್ಯ ಆರೋಪಿಯು ಇತ್ತೀಚೆಗೆ ಪೊಲೀಸರ ಗುಂಟೇಟಿನಿಂದ ಮೃತಪಟ್ಟ ಪ್ರಕರಣವನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಏರಿಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಪೊಲೀಸ್ ಇಲಾಖೆ ಹಾಗೂ ಸಿಬಿಐನ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದ ಮೀರನ್ ಅವರು, ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೊ (ಬಿಪಿಆರ್‌ಡಿ) ಹಾಗೂ ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೊ (ಎನ್‌ಸಿಆರ್‌ಬಿ) ಮಹಾ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.