ಇಸ್ರೇಲ್ ರಾಷ್ಟ್ರದ ಜೊತೆ ಜೊತೆಗೇ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ಪ್ಯಾಲೇಸ್ಟಿನಿಯನ್ ರಾಜ್ಯದ ಅಸ್ತಿತ್ವವನ್ನು ಭಾರತ ಬೆಂಬಲಿಸುತ್ತದೆ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ಗಾಜಾಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಎಲ್ಲಾ ನಿರ್ಣಯಗಳಿಂದ ಭಾರತ ದೂರವಿರುವುದರ ಬಗ್ಗೆ ರಾಜ್ಯಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಜೈಶಂಕರ್ ಉತ್ತರಿಸಿದ್ದು, ಇಸ್ರೇಲ್- ಪ್ಯಾಲೆಸ್ತೇನ್ ವಿಷಯದಲ್ಲಿ ಭಾರತ ದ್ವಿರಾಷ್ಟ್ರ ಪರಿಹಾರಕ್ಕೆ ಬೆಂಬಲ ನೀಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 7 ರಂದು ಆರಂಭವಾಗಿದ್ದ ಇಸ್ರೇಲ್- ಹಮಾಸ್ ಸಂಘರ್ಷದ ಬಳಿಕ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ (UNGA) ಪ್ಯಾಲೆಸ್ತೀನ್ ಬಗ್ಗೆ 13 ನಿರ್ಣಯಗಳನ್ನು ಮಂಡಿಸಲಾಗಿದೆ.
"ಇಸ್ರೇಲ್-ಹಮಾಸ್ ಸಂಘರ್ಷದ ಆರಂಭದಿಂದಲೂ, ಯುಎನ್‌ಜಿಎಯಲ್ಲಿ ಪ್ಯಾಲೆಸ್ತೀನ್‌ಗೆ ಸಂಬಂಧಿಸಿದ 13 ನಿರ್ಣಯಗಳನ್ನು ತರಲಾಯಿತು, ಅದರಲ್ಲಿ ಭಾರತವು 10 ನಿರ್ಣಯಗಳ ಪರವಾಗಿ ಮತ ಚಲಾಯಿಸಿತು ಮತ್ತು ಮೂರು ನಿರ್ಣಯಗಳಿಂದ ದೂರವಿತ್ತು" ಎಂದು ಜೈಶಂಕರ್ ಹೇಳಿದ್ದಾರೆ.
ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಪ್ಯಾಲೆಸ್ತೀನ್‌ಗೆ ಮಹತ್ವದ ಮಾನವೀಯ ನೆರವು ನೀಡಿದೆ. ಸಂಘರ್ಷ ಪ್ರಾರಂಭವಾದಾಗಿನಿಂದ, ಕೇಂದ್ರ ಸರ್ಕಾರ ಸರಿಸುಮಾರು 70 ಮೆಟ್ರಿಕ್ ಟನ್‌ಗಳ ನೆರವನ್ನು ವಿತರಿಸಿದೆ, ಇದರಲ್ಲಿ 16.5 ಮೆಟ್ರಿಕ್ ಟನ್ ಔಷಧಗಳು ಮತ್ತು ವೈದ್ಯಕೀಯ ಸರಬರಾಜುಗಳು ಎರಡು ಹಂತಗಳಲ್ಲಿ ಸೇರಿವೆ. ಹೆಚ್ಚುವರಿಯಾಗಿ, 2024 ರಲ್ಲಿ ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗೆ (UNRWA) ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿಗೆ $5 ಮಿಲಿಯನ್ ನ್ನು ವಿತರಿಸಲಾಯಿತು ಎಂದು ಜೈಶಂಕರ್ ವಿವರಿಸಿದ್ದಾರೆ.