ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಾಣಿಜ್ಯ ಉದ್ದೇಶಕ್ಕಾಗಿ ಪ್ರಾರಂಭಿಸಿರುವ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮೂಲಕ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ (ESA) ಉಪಗ್ರಹದ ಉಡ್ಡಯನಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಇಎಸ್‌ಎ ನಿರ್ಮಿಸಿರುವ ಪ್ರೊಬಾ (ಪ್ರಾಜೆಕ್ಟ್ ಫಾರ್ ಆನ್‌ಬೋರ್ಡ್ ಆಟೊನೊಮಿ)-3 ನೌಕೆಯನ್ನು ಇಸ್ರೊ ತನ್ನ ಉಡ್ಡಯನ ಕೇಂದ್ರದಿಂದ ಇಂದು (ಡಿ.4ರಂದು) ಹಾರಿಸಲಿದೆ. ಇದರ ಮೂಲಕ ಇಸ್ರೊ ತನ್ನ ವಾಣಿಜ್ಯ ಉದ್ದೇಶದ ಯೋಜನೆಯನ್ನೂ ಕಾರ್ಯರೂಪಕ್ಕೆ ತರುತ್ತಿದೆ. ಈ ಯೋಜನೆಯಲ್ಲಿ ಎರಡು ಉಪಗ್ರಹ ಹೊತ್ತ ಎರಡು ನೌಕೆಗಳು ಒಂದಾಗಿ ಉಡ್ಡಯನಗೊಳ್ಳುವ ಅಪರೂಪದ ಕಾರ್ಯಾಚರಣೆ ಇದಾಗಿದೆ. ಸೂರ್ಯನ ಮೇಲ್ಮೈ ವಾತಾವರಣದ ಅಧ್ಯಯನ ನಡೆಸುವ ಯೋಜನೆ ಇದಾಗಿದೆ.
'ಪ್ರೊಬಾಸ್ ಎಂದರೆ ಲ್ಯಾಟಿನ್‌ನಲ್ಲಿ 'ಮರಳಿ ಯತ್ನ ಮಾಡು' ಎಂದರ್ಥ. ಇದರಲ್ಲಿ ಎರಡು ನೌಕೆಗಳಾದ ಕೊರೊನಾಗ್ರಾಫ್ ಮತ್ತು ಆಕ್ಯುಲ್ಟರ್ ಒಂದು ವಿಶಿಷ್ಟ ರಚನೆ ಮೂಲಕ ಕಕ್ಷೆ ಸೇರಲಿವೆ. ಈ ಕಾರ್ಯಾಚರಣೆಗಾಗಿ ಪಿಎಸ್‌ಎಲ್‌ವಿ ನೌಕೆಯನ್ನು ಬಳಸಲಾಗುತ್ತಿದೆ. ಇದನ್ನು ಬೆಂಗಳೂರಿನಲ್ಲಿರುವ ಇಸ್ರೊ ಮುಖ್ಯ ಕಚೇರಿ ಮೂಲಕ ನಿಯಂತ್ರಿಸಲಾಗುತ್ತದೆ' ಎಂದು ಇಸ್ರೊದ ಅಧಿಕಾರಿಗಳು ತಿಳಿಸಿದ್ದಾರೆ.
ಪಿಎಸ್‌ಎಲ್‌ವಿಯ 61ನೇ ನೌಕೆ ಹಾಗೂ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ಸರಣಿಯ 26ನೇ ನೌಕೆ ಇವಾಗಿವೆ. ಡಿ. 4ರಂದು ಸಂಜೆ 4.08ಕ್ಕೆ ಶ್ರೀಹರಿಕೋಟಾದಲ್ಲಿ ಮೊದಲ ಉಡ್ಡಯನ ಘಟಕದಿಂದ ಇವು ನಭಕ್ಕೆ ಚಿಮ್ಮಲಿವೆ. 44.5 ಮೀಟರ್ ಎತ್ತರದ ಈ ರಾಕೇಟ್ 310 ಕೆ.ಜಿ. ತೂಕದ ಪ್ರೊಬಾ-3 ಹಾಗೂ 240 ಕೆ.ಜಿ.ಯ ಆಕ್ಯುಲ್ಟರ್ ನೌಕೆ ಸೇರಿ ಒಟ್ಟು 550 ಕೆ.ಜಿ. ತೂಕವನ್ನು ಹೊತ್ತು ತನ್ನ ನಿಗದಿತ ಕಕ್ಷೆಯತ್ತ 18 ನಿಮಿಷ ಪ್ರಯಾಣಿಸಲಿದೆ. ಒಟ್ಟು 60,530 ಕಿ.ಮೀ. ದೂರ ಕ್ರಮಿಸಲಿದೆ.
'ಪ್ರಥಮ ಕಕ್ಷೆ ಸೇರಿದ ನಂತರ, ಎರಡೂ ಉಪಗ್ರಹಗಳು ಪರಸ್ಪರ 150 ಮೀಟರ್ ದೂರ ಹಾರಾಟ ನಡೆಸಲಿವೆ. ನಂತರ ಒಂದು ಬೃಹತ್ ಉಪಗ್ರಹದ ಮಾದರಿಯ ರಚನೆ ಮೂಲಕ ಕಾರ್ಯಾಚರಣೆ ನಡೆಸಲಿವೆ. ಆಕ್ಯುಲ್ಟರ್ ಸೌರಫಲಕದ ಡಿಸ್ಕ್ ಅನ್ನು ತೆರೆಯಲಿದೆ. ಆ ಮೂಲಕ ಸೂರ್ಯನ ಮೇಲ್ಮೈ ಅಧ್ಯಯನ ಆರಂಭಿಸಲಿವೆ. ಸೂರ್ಯನಲ್ಲಿ ಅತಿ ಉಷ್ಣಾಂಶ ಹೊಂದಿರುವ ಭಾಗ ಎಂದೇ ಗುರುತಿಸಲಾಗುವ ಕೊರೊನಾದ ವೈಜ್ಞಾನಿಕ ಅಧ್ಯಯನವನ್ನು ಇದು ನಡೆಸಲಿದೆ' ಎಂದು ಇಎಸ್‌ಎ ಹೇಳಿದೆ.
ಈ ಜಂಟಿ ಉಪಗ್ರಹಗಳು ಸೂರ್ಯನ ಕಿರಣಗಳನ್ನು ತಡೆದು, ಕೃತಕ ಗ್ರಹಣ ಸೃಷ್ಟಿಸುತ್ತವೆ. ಆ ಮೂಲಕ ಸೂರ್ಯನ ಮೇಲ್ಮೈ ಅಧ್ಯಯನ ನಡೆಸುವ ಪ್ರಯತ್ನದ ಯೋಜನೆಯನ್ನು ತಜ್ಞರು ನಡೆಸಿದ್ದಾರೆ. ಈ ಉಪಗ್ರಹವನ್ನು ಭೂಮಿಯ ಸುತ್ತ ಅತ್ಯಂತ ದೀರ್ಘಾವಧಿಯ ವೃತ್ತಾಕಾರದಲ್ಲಿ ಸುತ್ತುವಂತೆ ಮಾಡುವ ಯೋಜನೆ ಇದಾಗಿದೆ. ಹೀಗಾಗಿ ಅತ್ಯಂತ ಸಮೀಪದ ಬಿಂದು 600 ಕಿ.ಮೀ. ದೂರದಲ್ಲಿ ಹಾಗೂ ಅತ್ಯಂತ ದೂರದ ಬಿಂದು 60,530 ಕಿ.ಮೀ. ದೂರದಲ್ಲಿದೆ.
ಈ ಯೋಜನೆಯಲ್ಲಿ ಉಡ್ಡಯನ ಭಾಗವನ್ನು ಇಸ್ರೊ ನಡೆಸಲಿದೆ. ಯೋಜನೆಯ ಕಾರ್ಯಾಚರಣೆಯನ್ನು ಐರೋಪ್ಯ ಬಾಹ್ಯಾಕಾಶ ಏಜೆನ್ಸಿ ನಡೆಸಲಿದೆ. 2023ರ ಸೆಪ್ಟೆಂಬರ್‌ನಲ್ಲಿ ಇಸ್ರೊ ಕೈಗೊಂಡ ಆದಿತ್ಯ ಎಲ್1 ಯೋಜನೆ ನಂತರದಲ್ಲಿ ಸೂರ್ಯನ ಅಧ್ಯಯನ ನಡೆಸುವ ಯೋಜನೆ ಇದಾಗಿದೆ.