ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಾಣಿಜ್ಯ ಉದ್ದೇಶಕ್ಕಾಗಿ ಪ್ರಾರಂಭಿಸಿರುವ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮೂಲಕ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ (ESA) ಉಪಗ್ರಹದ ಉಡ್ಡಯನವನ್ನು ನಾಳೆ(ಡಿ.5)ಗೆ ಮುಂದೂಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಕೇಂದ್ರದಲ್ಲಿ ಉಡ್ಡಯನಕ್ಕೆ ಸಜ್ಜಾಗಿದ್ದ ಪಿಎಸ್‌ಎಲ್‌ವಿ ಹಾಗೂ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ಒಳಗೊಂಡ ರಾಕೆಟ್ ಉಡ್ಡಯನದ ವೇಳೆ ತಾಂತ್ರಿಕ ದೋಷ ಕಂಡುಬಂದ ಕಾರಣ ನಾಳೆಗೆ ಮುಂದೂಡಲಾಗಿದೆ ಎಂದು ಇಸ್ರೊ ತಿಳಿಸಿದೆ.
ನಾಳೆ ಸಂಜೆ 4.12ಕ್ಕೆ ಶ್ರೀಹರಿಕೋಟಾದಲ್ಲಿ ಮೊದಲ ಉಡ್ಡಯನ ಘಟಕದಿಂದ ಇವು ನಭಕ್ಕೆ ಚಿಮ್ಮಲಿವೆ.
ಇಎಸ್‌ಎ ನಿರ್ಮಿಸಿರುವ ಪ್ರೊಬಾ (ಪ್ರಾಜೆಕ್ಟ್ ಫಾರ್ ಆನ್‌ಬೋರ್ಡ್ ಆಟೊನೊಮಿ)-3 ನೌಕೆಯನ್ನು ಇಸ್ರೊ ಹಾರಿಸಲಿದೆ. ಇದರ ಮೂಲಕ ಇಸ್ರೊ ತನ್ನ ವಾಣಿಜ್ಯ ಉದ್ದೇಶದ ಯೋಜನೆಯನ್ನೂ ಕಾರ್ಯರೂಪಕ್ಕೆ ತರುತ್ತಿದೆ. ಈ ಯೋಜನೆಯಲ್ಲಿ ಎರಡು ಉಪಗ್ರಹ ಹೊತ್ತ ಎರಡು ನೌಕೆಗಳು ಒಂದಾಗಿ ಉಡ್ಡಯನಗೊಳ್ಳುವ ಅಪರೂಪದ ಕಾರ್ಯಾಚರಣೆ ಇದಾಗಿದೆ. ಸೂರ್ಯನ ಮೇಲ್ಮೈ ವಾತಾವರಣದ ಅಧ್ಯಯನ ನಡೆಸುವ ಯೋಜನೆ ಇದಾಗಿದೆ.
ಪಿಎಸ್‌ಎಲ್‌ವಿಯ 61ನೇ ನೌಕೆ ಹಾಗೂ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ಸರಣಿಯ 26ನೇ ನೌಕೆ ಇವಾಗಿವೆ. 44.5 ಮೀಟರ್ ಎತ್ತರದ ಈ ರಾಕೆಟ್ 310 ಕೆ.ಜಿ. ತೂಕದ ಪ್ರೊಬಾ-3 ಹಾಗೂ 240 ಕೆ.ಜಿ.ಯ ಆಕ್ಯುಲ್ಟರ್ ನೌಕೆ ಸೇರಿ ಒಟ್ಟು 550 ಕೆ.ಜಿ. ತೂಕ ಇವೆ.