ವಾಷಿಂಗ್ಟನ್: ಅಮೆರಿಕದ 39ನೇ ಅಧ್ಯಕ್ಷರಾಗಿದ್ದ ಜಿಮ್ಮಿ ಕಾರ್ಟರ್ ನಿಧನರಾಗಿದ್ದಾರೆ. ಅವರಿಗೆ 100 ವರ್ಷ ವಯಸ್ಸಾಗಿತ್ತು. 1977ರಿಮದ 1981ರವರೆಗೆ ಅವರು ಅಮೆರಿಕ ಅಧ್ಯಕ್ಷರಾಗಿದ್ದರು.
ಜಾರ್ಜಿಯಾದ ಪ್ಲೇನ್ಸ್ನಲ್ಲಿರುವ ಅವರ ಮನೆಯಲ್ಲಿ ಕಾರ್ಟರ್ ನಿಧನರಾದರು ಎಂದು ಕಾರ್ಟರ್ ಸೆಂಟರ್ ತಿಳಿಸಿದೆ.
ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಮೂರನೇ ಅಧ್ಯಕ್ಷ ಜಿಮ್ಮಿ ಕಾರ್ಟರ್. ಅವರ ಗೌರವಾರ್ಥವಾಗಿ ಹರಿಯಾಣದ ಗ್ರಾಮಕ್ಕೆ ಕಾರ್ಟರ್ಪುರಿ ಎಂದು ಹೆಸರಿಡಲಾಗಿತ್ತು.
'ಇಂದು, ಅಮೆರಿಕ ಮತ್ತು ಜಗತ್ತು ಅಸಾಧಾರಣ ನಾಯಕ, ರಾಜಕಾರಣಿ ಮತ್ತು ಮಾನವತಾವಾದಿಯನ್ನು ಕಳೆದುಕೊಂಡಿದೆ'ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಾಕ್, ಚಿಪ್, ಜೆಫ್, ಆಯಮಿ ಎಂಬ ನಾಲ್ವರು ಮಕ್ಕಳನ್ನು ಅಗಲಿರುವ ಜಿಮ್ಮಿ ಅವರಿಗೆ 11 ಮಂದಿ ಮೊಮ್ಮಕ್ಕಳು, 14 ಮಂದಿ ಮರಿಮೊಮ್ಮಕ್ಕಳಿದ್ದಾರೆ.
'ನನ್ನ ತಂದೆ ಕೇವಲ ನನಗೆ ಮಾತ್ರವಲ್ಲ, ಶಾಂತಿ, ಮಾನವ ಹಕ್ಕುಗಳು ಮತ್ತು ಸ್ವಾರ್ಥ ರಹಿತ ಪ್ರೀತಿ ಬಯಸುವ ಎಲ್ಲರಿಗೂ ಅವರು ಹೀರೊ. ಅವರ ಜೊತೆ ನಾನು, ನನ್ನ ಸಹೋದರರು, ಸಹೋದರಿ ಮತ್ತು ಈ ಸಾಮಾನ್ಯ ನಂಬಿಕೆಗಳನ್ನು ಪ್ರಪಂಚದ ಜೊತೆ ಹಂಚಿಕೊಂಡೆವು. ಅವರು ಜನರನ್ನು ಒಟ್ಟುಗೂಡಿಸಿದ ರೀತಿಯಿಂದಾಗಿ ಜಗತ್ತು ನಮ್ಮ ಕುಟುಂಬವಾಗಿದೆ. ಈ ನಂಬಿಕೆಗಳನ್ನು ಮುಂದುವರಿಸುವ ಮೂಲಕ ಅವರ ಸ್ಮರಣೆಯನ್ನು ಗೌರವಿಸುವ ಎಲ್ಲರಿಗೂ ಧನ್ಯವಾದ ಹೇಳುತ್ತೇವೆ'ಎಂದು ಮಗ ಚಿಪ್ ಕಾರ್ಟರ್ ಹೇಳಿದ್ದಾರೆ.
'ತಮ್ಮ ಸಹಾನುಭೂತಿ ಮತ್ತು ನೈತಿಕ ಸ್ಪಷ್ಟತೆಯೊಂದಿಗೆ ಒಟ್ಟಾರೆ ಆರು ದಶಕಗಳಿಂದ ಕಾರ್ಟರ್, ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಲು, ಶಾಂತಿಯನ್ನು ಸ್ಥಾಪಿಸಲು, ನಾಗರಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳನ್ನು ಮುನ್ನಡೆಸಲು, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಉತ್ತೇಜಿಸಲು, ನಿರಾಶ್ರಿತರಿಗೆ ವಸತಿ ಸೌಲಭ್ಯ ಒದಗಿಸಲು ಮತ್ತು ಯಾವಾಗಲೂ ನಿರ್ಗತಿಕರಿಗಾಗಿ ಕೆಲಸ ಮಾಡಿದ್ದಾರೆ'ಎಂದು ಬೈಡನ್ ತಿಳಿಸಿದ್ದಾರೆ.
ಕಾರ್ಟರ್ ಅವರನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ವಿರೋಧಿಸುತ್ತಿದ್ದ ಭಾವಿ ಅಧ್ಯಕ್ಷ ಟ್ರಂಪ್ ಸಹ ಕಾರ್ಟರ್ ಅವರು ನಮ್ಮ ದೇಶದ ಬಗ್ಗೆ ನೈಜ ಪ್ರೇಮ ಮತ್ತು ಗೌರವ ಇಟ್ಟುಕೊಂಡಿದ್ದರು ಎಂದು ಹೊಗಳಿದ್ದಾರೆ.
ಅಮೆರಿಕವನ್ನು ಒಂದು ಅತ್ಯುತ್ತಮ ಜಾಗವನ್ನು ರೂಪಿಸಲು ಅವರು ಶ್ರಮಪಟ್ಟಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಅತ್ಯುನ್ನತ ಗೌರವ ನೀಡುತ್ತೇನೆ. ಅವರ ಅತ್ಯಂತ ಒಳ್ಳೆಯ ವ್ಯಕ್ತಿಯಾಗಿದ್ದರು ಎಂದಿದ್ದಾರೆ.