ನವದೆಹಲಿ: ಯುರೋಪಿಯನ್ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳಿಗೆ ಅತ್ಯಂತ ಒಲವುಳ್ಳ ರಾಷ್ಟ್ರಗಳ ಸ್ಥಾನಮಾನದ (MFN) ತೆರಿಗೆಯನ್ನು ಸ್ವಿಟ್ಜರ್ಲ್ ಲ್ಯಾಂಡ್ ಸರ್ಕಾರ ಹಿಂಪಡೆದಿದೆ.
ಸ್ವಿಸ್ ಮೂಲದ FMCG ಕಂಪನಿ ನೆಸ್ಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ತೆರಿಗೆ ಒಪ್ಪಂದ ಅಡಿ MFN ಸ್ಥಾನಮಾನ ಅನ್ವಯವನ್ನು ಭಾರತದ ಸುಪ್ರೀಂ ಕೋರ್ಟ್ ತಿರಸ್ಕರಿಸಿದ ನಂತರ ಸ್ವಿಸ್ ಸರ್ಕಾರ ಈ ಕ್ರಮ ಕೈಗೊಂಡಿದೆ.
ಈ ನಿರ್ಧಾರವು ಸ್ವಿಟ್ಜರ್ಲೆಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕಂಪನಿಗಳಿಗೆ ಹೆಚ್ಚಿನ ತೆರಿಗೆ ಹೊಣೆಗಾರಿಕೆಗೆ ಕಾರಣವಾಗುತ್ತದೆ.
ಈ ಸಂಬಂಧ ಡಿಸೆಂಬರ್ 11 ರಂದು ಆದೇಶ ಹೊರಡಿಸಿರುವ ಸ್ವಿಟ್ಜರ್ಲೆಂಡ್ ನ ಫೆಡರಲ್ ಡಿಪಾರ್ಟ್ ಮೆಂಟ್ ಆಫ್ ಫೈನಾನ್ಸ್, ಭಾರತದ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ದುಪ್ಪಟ್ಟು ತೆರಿಗೆ ತಡೆ ಒಪ್ಪಂದ (DTAA) ಅಡಿಯಲ್ಲಿನ MFN ಒಪ್ಪಂದವನ್ನು ಭಾರತದ ಕಡೆಯಿಂದ ಅನುಸರಿಸಿಲ್ಲ ಎಂಬುದನ್ನು ಸ್ವಿಸ್ ಪ್ರಾಧಿಕಾರವು ಒಪ್ಪಿಕೊಂಡಿದೆ. ಹೀಗಾಗಿ ಇದು ಜನವರಿ 1, 2025 ರಿಂದ ಜಾರಿಗೆ ಬರುವಂತೆ MFN ಸ್ಥಾನಮಾನವನ್ನು ಹಿಂಪಡೆಯುವುದಾಗಿ ಹೇಳಿದೆ.
ಜನವರಿ 1, 2025 ರ ನಂತರ ಸ್ವಿಟ್ಜರ್ಲೆಂಡ್ ಹೆಚ್ಚಿನ ತೆರಿಗೆ ವಿಧಿಸಬಹುದು. ಅಲ್ಲಿರುವ ಭಾರತೀಯ ಕಂಪನಿಗಳು ಪ್ರಸ್ತುತ MFN ಅಡಿಯಲ್ಲಿ ಶೇ. 5 ರಷ್ಟು ತೆರಿಗೆ ವಿಧಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಶೇ. 10 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಸ್ವಿಟ್ಜರ್ಲೆಂಡ್ ನಿರ್ಧಾರ ಭಾರತದೊಂದಿಗಿನ ದ್ವೀಪಕ್ಷೀಯ ಸಂಬಂಧ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಜನವರಿ 1, 2025 ರಿಂದ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಕಂಪನಿಗಳಿಗೆ ಹೆಚ್ಚಿನ ತೆರಿಗೆ ಹೊಣೆಗಾರಿಕೆಗಳಿಗೆ ಕಾರಣವಾಗುತ್ತದೆ ಎಂದು ನಂಗಿಯಾ ಆಂಡರ್ಸನ್‌ನ M&A ತೆರಿಗೆ ಪಾಲುದಾರ ಸಂದೀಪ್ ಜುಂಜುನ್‌ವಾಲಾ ಹೇಳಿದರು.