HEALTH TIPS

ಟೀ ಮಾರುವವರೂ ಪ್ರಧಾನಿಯಾಗುವಂತೆ ಪ್ರಜಾಪ್ರಭುತ್ವ ಗಟ್ಟಿಗೊಳಿಸಿದ ನೆಹರೂ: MP ಭಗತ್

ನವದೆಹಲಿ: 'ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಂವಿಧಾನದ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಸದೃಢಗೊಳಿಸಿದ್ದರಿಂದಾಗಿ ಟೀ ಮಾರುವವರೂ ಈ ದೇಶದ ಪ್ರಧಾನಿ ಆಗಬಹುದಾಗಿದೆ' ಎಂದು ಕಾಂಗ್ರೆಸ್ ಸಂಸದ ಸುಖದೇವ್ ಭಗತ್ ಹೇಳಿದ್ದಾರೆ.

ಸಂವಿಧಾನ ಅಂಗೀಕರಿಸಿ 75 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಲೋಕಸಭೆಯಲ್ಲಿ ಆಯೋಜಿಸಿರುವ ಚರ್ಚೆಯಲ್ಲಿ ಶನಿವಾರ ಮಾತನಾಡಿದ ಅವರು, 'ಆಡಳಿತಾರೂಢ ಪಕ್ಷವು ಕಾಂಗ್ರೆಸ್ ಮತ್ತು ನೆಹರೂ ಅವರ ಮೇಲೆ ವಾಗ್ದಾಳಿ ನಡೆಸುತ್ತಿದೆ.

ಆದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಇಂದಿಗೂ ಉಳಿದಿದೆ ಎಂದರೆ ಅದು ಅವರ ಕೊಡುಗೆ ಮಾತ್ರ' ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ಮಾತಿಗೆ ತಿರುಗೇಟು ನೀಡಿದರು.

'ನೆಹರೂ ಗಾಂಧಿ ಕುಟುಂಬದವರು ಸಂವಿಧಾನದ ಪ್ರತಿಯನ್ನು ತಲೆಮಾರುಗಳಿಂದ ತಮ್ಮ ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ' ಎಂಬ ರಾಜನಾಥ್ ಸಿಂಗ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಭಗತ್, 'ನಿಜವಾಗಿಯೂ ಹೌದು. ಸಂವಿಧಾನ ಪ್ರತಿಯನ್ನು ಅವರು ಇಟ್ಟುಕೊಂಡಿದ್ದಾರೆ. ಏಕೆಂದರೆ ಅದು ಅಷ್ಟು ಮಹತ್ವದ್ದು ಮತ್ತು ಬೆಲೆಕಟ್ಟಲಾಗದ್ದು' ಎಂದರು.

ಜಾರ್ಖಂಡ್‌ನ ಸಂಸದ ಲೊಹರ್ದಾಗಾ ಮಾತನಾಡಿ, 'ಬಿಜೆಪಿಯ ಮಾರ್ಗದರ್ಶಕ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಆರ್ಗನೈಸರ್‌ನಲ್ಲಿ ಮೂರು ಬಣ್ಣ ಅಶುಭವಾದ್ದರಿಂದ ತ್ರಿವರ್ಣ ಧ್ವಜವನ್ನು ಭಾರತವು ಒಪ್ಪಿಕೊಳ್ಳಬಾರದು ಎಂದು ಬರೆಯಲಾಗಿತ್ತು. 2000 ಇಸವಿಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರಾಗಿದ್ದ ಕೆ. ಸುದರ್ಶನ್ ಅವರು ಸಂವಿಧಾನ ಬದಲಿಸಲು ಕರೆ ನೀಡಿದ್ದರು. ಇದೇ ರೀತಿ ಸಂವಿಧಾನದಲ್ಲಿರುವ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಗುಣಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಲೇ ಇದೆ' ಎಂದು ಆರೋಪಿಸಿದರು.

'ಚೀನಾ ಜತೆ ಯುದ್ಧ ನಡೆದಾಗ ಆ ಕುರಿತು ಚರ್ಚೆಗೆ ಪ್ರಧಾನಿ ನೆಹರೂ ಅವಕಾಶ ಕಲ್ಪಿಸಿದ್ದರು. ಆದರೆ ಒಂದು ವ್ಯಾಪಾರ ಸಮೂಹಕ್ಕೆ ಸಂಬಂಧಿಸಿದ ಹೆಸರನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸುತ್ತಿದ್ದಂತೆ 'ಮುಟ್ಟಿದರೆ ಮುನಿ' ಗಿಡದಂತೆ ಇಡೀ ಸಂಸತ್ ಹಾಗೂ ಸರ್ಕಾರ ಮೌನಕ್ಕೆ ಶರಣಾಗಿವೆ' ಎಂದರು.

ಪಕ್ಷೇತರ ಸಂಸದ ಪಪ್ಪು ಯಾದವ್ ಮಾತನಾಡಿ, 'ಒಂದು ದೇಶ ಒಂದು ಚುನಾವಣೆ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಒಂದು ದೇಶ, ಒಂದು ಶಿಕ್ಷಣ, ಒಂದು ಆರೋಗ್ಯ ಕುರಿತು ಚರ್ಚೆಯೇ ಆಗುತ್ತಿಲ್ಲ. ಎಲ್ಲವನ್ನೂ ಖಾಸಗೀಕರಣ ಮಾಡಲು ಸರ್ಕಾರ ಹುನ್ನಾರ ನಡೆಸಿದೆ' ಎಂದು ವಾಗ್ದಾಳಿ ನಡೆಸಿದ ಅವರು, ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸದ ಸುಧಾಕರ ಸಿಂಗ್ ಮಾತನಾಡಿ, 'ಚುನಾವಣಾ ಬಾಂಡ್ ಜಾರಿಗೆ ತರುವ ಮೂಲಕ ಎಲ್ಲಾ ಪಕ್ಷ ಹಾಗೂ ಸ್ಪರ್ಧಿಗಳಿಗೂ ಚುನಾವಣೆಯಲ್ಲಿದ್ದ ಸಮಾನ ಅವಕಾಶವನ್ನು ಕಸಿದುಕೊಳ್ಳಲಾಗಿದೆ' ಎಂದು ಆರೋಪಿಸಿದರು.

ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಸಂಸದ ಗುರುಮೂರ್ತಿ ಮಡ್ಡಿಲ ಮಾತನಾಡಿ, 'ಸಂವಿಧಾನ ಎಂದರೆ ಕೇವಲ ರಾಜಕೀಯ ದಾಖಲೆಯಲ್ಲ. ಬದಲಿಗೆ ಪರಿವರ್ತನೆಯ ಪ್ರಣಾಳಿಕೆಯಾಗಿದೆ. ಇತಿಹಾಸದಲ್ಲಿ ಆದ ಅನ್ಯಾಯವನ್ನು ಸರಿಪಡಿಸಿ ಸಮಾನತೆಯನ್ನು ಸ್ಥಾಪಿಸುವ ಗುಣ ಅದಕ್ಕಿದೆ' ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries