ನವದೆಹಲಿ: ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪತ್ರದ ವಿಚಾರವಾಗಿ ಮತ್ತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, 'ಯಾರ ವೈಯುಕ್ತಿಕ ಆಸ್ತಿಯಲ್ಲ.. ವಾಪಸ್ ಮಾಡಿ' ಎಂದು ಆಗ್ರಹಿಸಿದೆ.
ಭಾರತೀಯ ಜನತಾ ಪಕ್ಷ (BJP) ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ದೇಶದ ಮೊದಲ ಪ್ರಧಾನ ಮಂತ್ರಿಗಳ (ಜವಾಹರ್ ಲಾಲ್ ನೆಹರು) ವಸ್ತುಗಳನ್ನು ಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ ಹಿಂದಿರುಗಿಸುವಂತೆ ಒತ್ತಾಯಿಸಿದೆ.
ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಹಲವಾರು ವ್ಯಕ್ತಿಗಳೊಂದಿಗೆ ಹೊಂದಿದ್ದ ಪತ್ರ ವ್ಯವಹಾರಗಳು ಮತ್ತು ಅವುಗಳ ಕುರಿತ ದಾಖಲೆಗಳು ದೇಶಕ್ಕೆ ಸೇರಿದ್ದಾಗಿದ್ದು, ಅವು ಯಾರ ವೈಯಕ್ತಿಕ ಆಸ್ತಿಯಲ್ಲ. ಹೀಗಾಗಿ ಕೂಡಲೇ ಅವುಗಳನ್ನು ಸಂಗ್ರಹಾಲಯ ಮತ್ತು ಗ್ರಂಥಾಲಯಕ್ಕೆ ಹಿಂದಿರುಗಿಸಬೇಕು ಎಂದು ಕಿಡಿಕಾರಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಈ ವಿಷಯದ ಕುರಿತು ಪಿಎಂಎಂಎಲ್ ನಡೆಸಿದ ಚರ್ಚೆಗಳ ವರದಿಗಳನ್ನು ಉಲ್ಲೇಖಿಸಿದರು. 'ಭಾರತದ ಕೊನೆಯ ಬ್ರಿಟಿಷ್ ವೈಸ್‌ರಾಯ್ ಅವರ ಪತ್ನಿ ಎಡ್ವಿನಾ ಮೌಂಟ್ ಬ್ಯಾಟನ್ ಮತ್ತು ಅಂದಿನ ನಾಯಕರಾದ ಜಯಪ್ರಕಾಶ್ ನಾರಾಯಣ್ ಮತ್ತು ಜಗಜೀವನ್ ರಾಮ್ ಅವರೊಂದಿಗಿನ ನೆಹರು ಅವರ ಸಾಕಷ್ಟು ಪತ್ರವ್ಯವಹಾರ ನಡೆಸಿದ್ದರು.
ಈ ಹಿಂದೆ ಇವು ನೆಹರು ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯಲ್ಲಿ ಜೋಪಾನವಾಗಿದ್ದವು. ಆದರೆ 2008 ರಲ್ಲಿ ಸೋನಿಯಾ ಗಾಂಧಿ ಅವರು ಅವುಗಳನ್ನು ಪಡೆದುಕೊಂಡಿದ್ದರು ಎಂದು ಆರೋಪಿಸಿದ್ದಾರೆ.
ಈ ಕುರಿತು ಇಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಗೆಜೇಂದ್ರ ಸಿಂಗ್ ಶೇಖಾವತ್ ತಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಸಂಬಿತ್ ಪಾತ್ರ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಆದರೆ ಇದಕ್ಕೆ ಉತ್ತರಿಸಿದ ಶೇಖಾವತ್ ಅವರು, ಸಂಬಿತ್ ಪಾತ್ರಾ ಅವರ ಪ್ರಶ್ನೆಯು ಬಿಜೆಪಿ ಸದಸ್ಯ ಸೌಮಿತ್ರ ಖಾನ್ ಅವರು ಸದನದಲ್ಲಿ ಎತ್ತಿದ ಮುಖ್ಯ ಪ್ರಶ್ನೆಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಅಂತೆಯೇ ಸಂಬಿತ್ ಪಾತ್ರ ಅವರ ಸಲಹೆಗಳನ್ನು ತಾವು ದಾಖಲಿಸಿಕೊಂಡಿದ್ದು, ಈ ವಿಷಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಸಚಿವರು ಹೇಳಿದರು.