ನವದೆಹಲಿ: ಕಾರ್ಮಿಕರಿಗೆ ತಾವು ಕೆಲಸ ಮಾಡುವ ಕಾರ್ಖಾನೆ ಬಳಿಯೇ ಸೂಕ್ತ ವಸತಿ ಸೌಕರ್ಯ ಕಲ್ಪಿಸಿ, ಅದಕ್ಕೆ ಆಸ್ತಿ ತೆರಿಗೆ, ವಿದ್ಯುತ್ ಹಾಗೂ ನೀರಿನ ಶುಲ್ಕದಲ್ಲಿ ರಿಯಾಯಿತಿ ನೀಡುವ ಮೂಲಕ ಅವರ ಜೀವನ ಗುಣಮಟ್ಟವನ್ನು ಹೆಚ್ಚಿಸಬಹುದು. ಇದು ಪರೋಕ್ಷವಾಗಿ ತಯಾರಿಕಾ ವಲಯದ ಬೆಳವಣಿಗೆಗೆ ನೆರವಾಗಲಿದೆ ಎಂದು ನೀತಿ ಆಯೋಗವು ಶಿಫಾರಸು ಮಾಡಿ ಸರ್ಕಾರಕ್ಕೆ ಗುರುವಾರ ವರದಿ ಸಲ್ಲಿಸಿದೆ.
ಸೂಕ್ತ ವಸತಿ ಸೌಕರ್ಯ ಇಲ್ಲದ ಕಾರಣ, ಮುಖ್ಯವಾಗಿ ಮಹಿಳೆಯರನ್ನು ಒಳಗೊಂಡು ಕಾರ್ಮಿಕರು ಬೇರೆಡೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ತಯಾರಿಕಾ ವಲಯದ ಬೆಳವಣಿಗೆ ಕುಂಠಿತಗೊಂಡಿದೆ. 'ಕಾರ್ಖಾನೆ ಪಕ್ಕದಲ್ಲೇ ವಸತಿ ಸೌಕರ್ಯ (SAFE) ನೀಡುವುದರಿಂದ ತಯಾರಿಕಾ ವಲಯದ ಬೆಳವಣಿಗೆ' ಎಂಬ ಶೀರ್ಷಿಕೆಯಡಿ ಈ ವರದಿಯನ್ನು ಮಂಡಿಸಲಾಗಿದೆ.
ವಸತಿ ಸೌಕರ್ಯಕ್ಕೆ ಜಿಎಸ್‌ಟಿ ವಿನಾಯಿತಿಯನ್ನೂ ನೀಡಬಹುದು. ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿರುವ ಕರಡು ಅಧಿಸೂಚನೆಯಂತೆ ಕೈಗಾರಿಕಾ ಶೆಡ್, ಶಾಲೆ, ಕಾಲೇಜು ಹಾಗೂ ಹಾಸ್ಟೆಲ್‌ಗಳನ್ನು ಒದಗಿಸಲು ಅನುಮತಿಸಲಾಗಿದೆ. ಇದನ್ನೇ ಬಳಸಿಕೊಂಡು ಕಾರ್ಮಿಕರಿಗೆ ಸುರಕ್ಷಿತ ವಸತಿ ಸಮುಚ್ಚಯಗಳನ್ನು ನಿರ್ಮಿಸಿ, ಮೂಲಸೌಕರ್ಯ ಕಲ್ಪಿಸಬಹುದು. ಇದಕ್ಕಾಗಿ ಯೋಜನಾ ವೆಚ್ಚದ ಶೇ 30ರಿಂದ 40ರಷ್ಟು ವೆಚ್ಚವನ್ನು ಕಾರ್ಯಸಾಧ್ಯತೆಯ ಅಂತರ ನಿಧಿ ಮೂಲಕ ನೀಡಲೂಬಹುದು ಎಂದೂ ಹೇಳಲಾಗಿದೆ.
2024-25ರ ಕೇಂದ್ರ ಬಜೆಟ್‌ನಲ್ಲಿ ಕೈಗಾರಿಕೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಬಾಡಿಗೆ ಮನೆಯೊಂದಿಗೆ ಡಾರ್ಮೆಟರಿ ಶೈಲಿಯ ವಸತಿ ಸೌಕರ್ಯಗಳ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದರು. ಇದನ್ನೇ ಉಲ್ಲೇಖಿಸಿರುವ ನೀತಿ ಆಯೋಗದ ವರದಿಯು, ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಕಾರ್ಯಗತಗೊಳಿಸಬಹುದು. ಇದರಿಂದಾಗಿ ಕೈಗಾರಿಕಾ ವಲಯದ ಬೆಳವಣಿಗೆಯ ದರ ಸದ್ಯದ ಶೇ 17ರಿಂದ ಶೇ 25ಕ್ಕೆ ಏರಿಕೆಯಾಗುವ ಮೂಲಕ 2047ರ ವಿಕಸಿತ ಭಾರತ ಪರಿಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದೆನ್ನಲಾಗಿದೆ.
2023-24ರ ಆರ್ಥಿಕ ಸಮೀಕ್ಷೆಯ ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆ ಪೂರಕವಾಗಿ 2030ರ ಹೊತ್ತಿಗೆ 78.5 ಲಕ್ಷ ಉದ್ಯೋಗವನ್ನು ಸೃಜಿಸಬೇಕಾಗಿದೆ. ಇವುಗಳು ಹೆಚ್ಚಾಗಿ ನಿರ್ಮಾಣ ವಲಯದಿಂದಲೇ ಬರಬೇಕಾಗಿದ್ದು, ಅವು ಬೃಹತ್ ಕೈಗಾರಿಕೆಗಳ ಮೂಲಕ ಕಾರ್ಯಸಾಧ್ಯ ಎಂದು ಅಂದಾಜಿಸಲಾಗಿದೆ.