ಭೋಪಾಲ್: ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಗಳ ಬಗ್ಗೆ ಮಾಜಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರಿಗೆ ತಿಳಿದಿರಲಿಲ್ಲ. ಆದರೆ, 'ಚಾಯ್‌ವಾಲಾ' ಎಂದು ಕರೆಯುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಗೊತ್ತಿತ್ತು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ವ್ಯಂಗ್ಯವಾಡಿದ್ದಾರೆ.
ಮಧ್ಯಪ್ರದೇಶದ ಐಎಎಸ್ ಅಸೋಸಿಯೇಷನ್‌ನ ನಾಗರಿಕ ಸೇವಾ ಸಭೆ-2024 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಮನಮೋಹನ್ ಸಿಂಗ್ ಅವರು ಆರ್‌ಬಿಐ ಗವರ್ನರ್, ಕೇಂದ್ರ ಹಣಕಾಸು ಸಚಿವರು, ಪ್ರಧಾನ ಮಂತ್ರಿಯೂ ಆಗಿದ್ದರು. ಇದರ ಹೊರತಾಗಿಯೂ ಅನೇಕ ಶೈಕ್ಷಣಿಕ ಪದವಿಗಳನ್ನು ಹೊಂದಿದ್ದರೂ ಶೂನ್ಯ ಬ್ಯಾಲೆನ್ಸ್‌ನೊಂದಿಗೆ ಬ್ಯಾಂಕ್ ಖಾತೆಗಳನ್ನು ತೆರೆಯುವ ಬಗ್ಗೆ ತಿಳಿದಿರಲಿಲ್ಲ. ಆದರೆ, ಒಬ್ಬ ಸಾಮಾನ್ಯ ಚಾಯ್‌ವಾಲಾಗೆ (ಮೋದಿ) ಇದರ ಬಗ್ಗೆ ಗೊತ್ತಿತ್ತು' ಎಂದು ಹೇಳಿದ್ದಾರೆ.
2014ರ ಆಗಸ್ಟ್ 14ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ 'ಪ್ರಧಾನಮಂತ್ರಿ ಜನಧನ ಯೋಜನೆ'ಯನ್ನು (ಪಿಎಂಜೆಡಿವೈ) ಜಾರಿಗೆ ತಂದಿತ್ತು. 2024ರ ಆಗಸ್ಟ್ ವೇಳೆಗೆ ಪಿಎಂಜೆಡಿವೈ ಅಡಿಯಲ್ಲಿ 53.14 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಡೆಸುವಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗವು ಸಮಾನ ಉದ್ದೇಶಗಳನ್ನು ಹೊಂದಿರುವುದರ ಜತೆ ವಿಭಿನ್ನ ಜವಾಬ್ದಾರಿಗಳನ್ನು ಹೊಂದಿರುತ್ತೇವೆ' ಎಂದು ಯಾದವ್ ಹೇಳಿದ್ದಾರೆ.
'ಯಾವುದೇ ಯೋಜನೆ ಕುರಿತು ನಿರ್ಧಾರವನ್ನು ತೆಗೆದುಕೊಳ್ಳುವುದು ಸುಲಭ. ಆದರೆ, ದೊಡ್ಡ ಪ್ರಮಾಣದಲ್ಲಿ ಅದರ ಅನುಷ್ಠಾನವು ಸವಾಲಿನದ್ದಾಗಿರುತ್ತದೆ. ಅಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳ ದಕ್ಷತೆ ಶ್ಲಾಘನೀಯ' ಎಂದು ಯಾದವ್ ಪ್ರತಿಪಾದಿಸಿದ್ದಾರೆ.