ಟೆಲ್ ಅವೀವ್: ಲಂಚ, ವಂಚನೆ ಹಾಗೂ ನಂಬಿಕೆ ದ್ರೋಹದಂತ ಆರೋಪ ಎದುರಿಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇದೇ ಮೊದಲ ಬಾರಿಗೆ ವಿಚಾರಣೆಗೆ ಹಾಜರಾಗಿ, ನ್ಯಾಯಾಲಯದ ಕಟಕಟೆಯಲ್ಲಿ ಇಂದು (ಡಿ. 10) ನಿಂತರು. ತಮ್ಮ ವಿರುದ್ಧದ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ.
ಆರೋಪ ಸಾಬೀತಾದರೆ ಅವರ ಮುಂದಿನ ಭವಿಷ್ಯವೇನಾಗಲಿದೆ ಎಂಬ ಚರ್ಚೆ ಈಗ ನಡೆಯುತ್ತಿದೆ.
ಟೆಲ್ ಅವೀವ್: ತಮ್ಮ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಆರೋಪ ಕುರಿತು ಇದೇ ಮೊದಲ ಬಾರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಚಾರಣೆಗೆ ಹಾಜರಾಗಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ತಲೆದೋರಿರುವ ನಡುವೆಯೇ ನೆತನ್ಯಾಹು ವಿರುದ್ಧದ ಆರೋಪವು ಇಸ್ರೇಲ್‌ನ ಸಾರ್ವಜನಿಕರಲ್ಲಿ ಭಿನ್ನ ಅಭಿಪ್ರಾಯಗಳನ್ನು ಮೂಡಿಸಿದೆ.
ನೆತನ್ಯಾಹು ವಿರುದ್ಧ ಇರುವ ಆರೋಪಗಳೇನು?
2019ರಲ್ಲಿ ನೆತನ್ಯಾಹು ವಿರುದ್ಧ ಲಂಚ, ವಂಚನೆ ಹಾಗೂ ನಂಬಿಕೆ ದ್ರೋಹ ಆರೋಪಗಳು ಕೇಳಿಬಂದಿದ್ದವು. ಆದರೆ ಅವೆಲ್ಲವುಗಳನ್ನು ನೆತನ್ಯಾಹು ನಿರಾಕರಿಸಿದ್ದಾರೆ. 2020ರಲ್ಲಿ ನೆತನ್ಯಾಹು ವಿರುದ್ಧ ಕೇಳಿಬಂದ ಆರೋಪಗಳ ವಿಚಾರಣೆ ಆರಂಭವಾಯಿತು. ಅದರಂತೆಯೇ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾದವು. ತನ್ನ ಮೇಲಿನ ಆರೋಪಗಳನ್ನು ಅಲ್ಲಗಳೆದ ಅವರು, ತಾನು ನಿರ್ದೋಷಿ ಎಂದಿದ್ದಾರೆ.
ಪ್ರಕರಣ-1
ಇಸ್ರೇಲ್‌ನ ಬೆಝೆಕ್ ಟೆಲಿಕಾಂಗೆ ₹4,200 ಕೋಟಿ ಮೌಲ್ಯದ ಪರವಾನಗಿ ದೊರಕಿಸಲು ಪ್ರಧಾನಿ ಅನುಕೂಲ ಮಾಡಿಕೊಟ್ಟಿದ್ದು, ಇದಕ್ಕೆ ಪ್ರತಿಯಾಗಿ ಬೆಝೆಕ್ ನಿಯಂತ್ರಣದ ಸುದ್ದಿ ತಾಣದಲ್ಲಿ ನೆತನ್ಯಾಹು ಹಾಗೂ ಅವರ ಪತ್ನಿ ಸಾರಾ ಅವರ ಪರವಾಗಿ ಸುದ್ದಿಗಳು ಪ್ರಸಾರವಾಗುವ ಒಳ ಒಪ್ಪಂದ ಮಾಡಿಕೊಂಡು ಪರಸ್ಪರ ನೆರವಾಗಿದ್ದಾರೆ. ಇದರಿಂದಾಗಿ ನೆತನ್ಯಾಹು ವಿರುದ್ಧ ಲಂಚ, ವಂಚನೆ ಹಾಗೂ ನಂಬಿಕೆ ದ್ರೋಹ ಪ್ರಕರಣಗಳು ದಾಖಲಾಗಿವೆ.
ಪ್ರಕರಣ-2
ಹಾಲಿವುಡ್ ನಿರ್ಮಾಪಕರೂ ಆಗಿರುವ ಇಸ್ರೇಲ್ ಮೂಲದ ಅರ್ನಾನ್ ಮಿಲ್ಚನ್ ಅವರಿಂದ ₹1.78 ಕೋಟಿ ಮೌಲ್ಯದ ಉಡುಗೊರೆಯನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾದ ಕೋಟ್ಯಧಿಪತಿ ಉದ್ಯಮಿ ಜೇಮ್ಸ್ ಪ್ಯಾಕರ್ ಅವರಿಂದ ಉಡುಗೊರೆಯಾಗಿ ಶಾಂಪೇನ್ ಮತ್ತು ಸಿಗಾರ್ ಅನ್ನು ಪಡೆದು ಅವರ ಉದ್ದಿಮೆಗೆ ಅಕ್ರಮವಾಗಿ ನೆರವಾಗಿದ್ದಾರೆ ಎಂಬ ಆರೋಪವಿದೆ.
ಪ್ರಕರಣ-3
ಇಸ್ರೇಲ್‌ನ ಯಡಿಯಾತ್ ಅರೋನೋಥ್ ವೃತ್ತಪತ್ರಿಕೆಯ ಮಾಲೀಕ ಅರ್ನಾನ್ ಮೋಝೆಸ್ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ನೆತನ್ಯಾಹು, ತಮ್ಮ ಪರವಾಗಿ ಸುದ್ದಿ ಬರೆಯಿಸಿಕೊಳ್ಳುತ್ತಿದ್ದರು. ಇದಕ್ಕೆ ಪ್ರತಿಯಾಗಿ ಪ್ರತಿಸ್ಪರ್ಧಿ ಪತ್ರಿಕೆಯ ಪ್ರಸಾರ ಕಡಿಮೆಯಾಗುವಂತೆ ಕಾನೂನು ಹೇರುತ್ತಿದ್ದರು. ವಂಚನೆ ಹಾಗೂ ದ್ರೋಹ ಎಸಗಿದ ಪ್ರಕರಣಗಳು ದಾಖಲಾಗಿವೆ.
ಈ ಪ್ರಕರಣಗಳ ತೀರ್ಪು ಎಂದು?
ನೆತನ್ಯಾಹು ಅವರು ಮನವಿ ಒಪ್ಪಂದ ಕೋರಿಲ್ಲ ಎಂದಾದರೆ, ಪ್ರಕರಣದ ವಿಚಾರಣೆಗೆ ನ್ಯಾಯಾಧೀಶರು ಹಲವು ತಿಂಗಳುಗಳನ್ನು ತೆಗೆದುಕೊಳ್ಳಬಹುದು.
ಇಸ್ರೇಲ್‌ನ ಕಾನೂನು ಪ್ರಕಾರ, ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗದ ಹೊರತು, ಹುದ್ದೆ ತ್ಯಜಿಸುವ ಅಗತ್ಯವಿಲ್ಲ ಎಂದಿದೆ. ಕೇಳಿಬಂದಿರುವ ಆರೋಪಗಳ ಕುರಿತು ಮೇಲ್ಮನವಿ ಸಲ್ಲಿಸಿದರೆ, ಅದು ಸಾಬೀತಾಗುವವರೆಗೂ ಹುದ್ದೆಯಲ್ಲಿ ಮುಂದುವರಿಯಬಹುದು.
ನೇತನ್ಯಾಹು ಜೈಲಿಗೆ ಹೋಗುವ ಸಾಧ್ಯತೆ ಇದೆಯೇ?
ಇಸ್ರೇಲ್‌ನಲ್ಲಿ ಲಂಚ ಪಡೆದ ಅಪರಾಧಕ್ಕೆ 10 ವರ್ಷ ಜೈಲು ಅಥವಾ ದಂಡವಿದೆ. ವಂಚನೆ ಹಾಗೂ ನಂಬಿಕೆ ದ್ರೋಹ ಅಪರಾಧಕ್ಕೆ ಮೂರು ವರ್ಷ ಜೈಲು ಶಿಕ್ಷೆಯಿದೆ.
ಇವೆಲ್ಲದರ ಪರಿಣಾಮವೇನು?
2023ರ ಅ. 7ರಂದು ಹಮಾಸ್ ಬಂಡುಕೋರರು ನಡೆಸಿದ ದಾಳಿಯು ಇಸ್ರೇಲಿಗಳನ್ನು ಬೆಚ್ಚಿಸಿತು. ಇದರ ಪರಿಣಾಮ ಬಂಡುಕೋರರ ಸದೆಬಡಿಯಲು ಗಾಜಾ ಪಟ್ಟಿ ಮೇಲೆ ಇಸ್ರೇಲ್ ದಾಳಿ ನಡೆಸಿತು. ನೆತನ್ಯಾಹು ಅವರ ಈ ದಿಟ್ಟ ನಡೆಗೆ ಇಡೀ ದೇಶವೇ ಅವರಿಗೆ ಬೆಂಬಲ ಸೂಚಿಸಿತು. ಆದರೆ ನೇತನ್ಯಾಹು ವಿರುದ್ಧ ಕೇಳಿಬಂದಿರುವ ಈ ಆರೋಪಗಳು ಇಸ್ರೇಲಿಗಳನ್ನು ವಿಭಜಿಸಿದೆ.
2022ರಲ್ಲಿ ನೆತನ್ಯಾಹು ಅವರ ಅಭೂತಪೂರ್ವ ಜಯದ ನಂತರ, ಬಲಪಂಥೀಯ ಸರ್ಕಾರವು ನ್ಯಾಯಾಂಗಕ್ಕಿರುವ ಅಧಿಕಾರವನ್ನು ಮೊಟಕುಗೊಳಿಸುವ ಅಭಿಯಾನ ಆರಂಭಿಸಿತು. ಇದನ್ನು ಇಸ್ರೇಲ್‌ನ ಜನತೆ ವ್ಯಾಪಕವಾಗಿ ವಿರೋಧಿಸಿದರು. ದೇಶದಲ್ಲಿರುವ ಪ್ರಜಾತಂತ್ರ ವ್ಯವಸ್ಥೆಯ ಆರೋಗ್ಯದ ಕುರಿತು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳೂ ಕಳವಳ ವ್ಯಕ್ತಪಡಿಸಿದವು.
ನ್ಯಾಯಾಂಗದೊಂದಿಗಿನ ಸಂಬಂಧ ಮತ್ತು ಸದ್ಯ ಎದುರಿಸುತ್ತಿರುವ ವಿಚಾರಣೆ ಕುರಿತು ಸಂಬಂಧವನ್ನು ನೆತನ್ಯಾಹು ನಿರಾಕರಿಸಿದ್ದಾರೆ. ಯುದ್ಧ ಆರಂಭವಾಗುತ್ತಿದ್ದಂತೆ ತಮ್ಮ ಹಿಂದಿನ ಯೋಜನೆಯನ್ನು ಕೈಬಿಟ್ಟಿದ್ದರು. ಆದರೆ ಕಳೆದ ಕೆಲ ವಾರಗಳಿಂದ ನ್ಯಾಯಾಂಗ ವ್ಯವಸ್ಥೆ ಪರಿಷ್ಕರಿಸುವ ಕುರಿತು ಅವರು ಮಾತನಾಡುತ್ತಿರುವುದು ವರದಿಯಾಗಿದೆ.