ಚಂಡೀಗಢ: ಇಂದು ಪಂಜಾಬ್ ಬಂದ್‌ಗೆ ಕರೆ ನೀಡಿರುವ ರೈತ ಸಂಘಟನೆಗಳು ರಾಜ್ಯದ ಹಲವೆಡೆ ರಸ್ತೆಗಳನ್ನು ಬಂದ್ ಮಾಡಿವೆ. ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬಂದ್‌ಗೆ ಕರೆ ನೀಡಿವೆ.
ಬೆಳಿಗ್ಗೆ 7 ಗಂಟೆಗೆ ಆರಂಭವಾಗಿರುವ ಬಂದ್ ಸಂಜೆ 4 ಗಂಟೆವರೆಗೆ ನಡೆಯಲಿದೆ. ಧಾರೇರಿ ಜತ್ತನ್ ಪ್ಲಾಜಾ ಬಳಿ ರೈತರು ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದ್ದು, ಪಟಿಯಾಲ-ಚಂಡೀಗಢ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾಗಿದೆ.
ಅಮೃತಸರದ ಗೋಲ್ಡನ್ ಗೇಟ್‌ನಲ್ಲಿ, ರೈತರು ನಗರದ ಪ್ರವೇಶ ಬಿಂದುವಿನ ಬಳಿ ಜಮಾಯಿಸಲು ಪ್ರಾರಂಭಿಸಿದ್ದು, ಬಟಿಂಡಾದ ರಾಂಪುರ ಫುಲ್‌ನಲ್ಲಿ ಅವರು ರಸ್ತೆಗಳನ್ನು ತಡೆದಿದ್ದಾರೆ.
ಸಂಪೂರ್ಣ ಬಂದ್ ಇದ್ದರೂ ತುರ್ತು ಸೇವೆಗಳಿಗೆ ಅವಕಾಶ ನೀಡಲಾಗುವುದು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಭಾನುವಾರ ಹೇಳಿದ್ದರು.
'ಬೆಳಿಗ್ಗೆ 7 ರಿಂದ ಸಂಜೆ 4ರವರೆಗೆ ಬಂದ್ ನಡೆಸಲಾಗುತ್ತದೆ. ಆದರೂ ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತವೆ. ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ಅಥವಾ ಉದ್ಯೋಗ ಸಂದರ್ಶನದಲ್ಲಿ ಭಾಗವಹಿಸಲು ಹೋಗುವವರು, ಮದುವೆಗೆ ತೆರಳುವವರಿಗೆ ತಡೆಹಾಕುವುದಿಲ್ಲ'ಎಂದು ಅವರು ಹೇಳಿದ್ದರು.
ಈ ನಡುವೆ , 70 ವರ್ಷದ ರೈತ ಜಗಜೀತ್ ಸಿಂಗ್ ದಲ್ಲೇವಾಲ್ ಅವರ ಉಪವಾಸ ಸತ್ಯಾಗ್ರಹ 35ನೇ ದಿನಕ್ಕೆ ಕಾಲಿಟ್ಟಿದೆ. ವೈದ್ಯಕೀಯ ಚಿಕಿತ್ಸೆಯನ್ನೂ ಅವರು ನಿರಾಕರಿಸಿದ್ದಾರೆ. ರೈತರ ಬೇಡಿಕೆಗೆ ಸರ್ಕಾರ ಸ್ಪಂದಿಸುವವರೆಗೂ ಅನ್ನ, ನೀರು ಮುಟ್ಟುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಾವಿರಾರು ರೈತರು ಪಂಜಾಬ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ದಲ್ಲೇವಾಲ್ ಅವರ ಮನವೊಲಿಸಿ ಆಸ್ಪತ್ರೆಗೆ ಕರೆದೊಯ್ಯುವಂತೆ ಡಿಸೆಂಬರ್ 31ರವರೆಗೆ ಸುಪ್ರೀಂ ಕೋರ್ಟ್, ಪಂಜಾಬ್ ಸರ್ಕಾರಕ್ಕೆ ಗಡುವು ವಿಧಿಸಿದೆ.