ಹೈದರಾಬಾದ್: ಪುಷ್ಪ 2 ಸಿನಿಮಾ ನಟ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಹೈದರಾಬಾದ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿನಿಮಾದ ಪ್ರೀಮಿಯರ್ ಶೋ ವೇಳೆಯಲ್ಲಿ ಯಾವುದೇ ಮಾಹಿತಿ ನೀಡದೇ ಹೈದರಾಬಾದ್ ನ ಥಿಯೇಟರ್ ಒಂದಕ್ಕೆ ಅಲ್ಲು ಅರ್ಜುನ್ ಭೇಟಿ ನೀಡಿದ್ದರು. ನೆಚ್ಚಿನ ನಟನನ್ನು ನೋಡಲು ಅಲ್ಲಿ ನೆರೆದಿದ್ದ ಜನರು ಮುಗಿಬಿದ್ದ ಪರಿಣಾಮ ಕಾಲ್ತುಳಿತ ಉಂಟಾಗಿತ್ತು. ಘಟನೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು.
ಘಟನೆಯ ಸಂಬಂಧ ಅಲ್ಲು ಅರ್ಜುನ್ ವಿರುದ್ಧ 105, 118(1)r/w 3(5) ಬಿಎನ್ಎಸ್ ಕಾಯ್ದೆಯಡಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಮೃತರ ಕುಟುಂಬ ಸದಸ್ಯರ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಟ ಅಲ್ಲು ಅರ್ಜುನ್ ಅಷ್ಟೇ ಅಲ್ಲದೇ ಹೆಚ್ಚುವರಿ ಭದ್ರತೆಗೆ ವ್ಯವಸ್ಥೆ ಮಾಡದ, ಜನದಟ್ಟನೆ ನಿರ್ವಹಣೆಗೆ ಕ್ರಮ ಕೈಗೊಳ್ಳದ ಸಂಧ್ಯಾ ಥಿಯೇಟರ್ ನ ಆಡಳಿತ ಮಂಡಳಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.