ಕೀವ್: ಉಕ್ರೇನ್‌ನ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾನಿಗೊಳಿಸುವ ಗುರಿಯಾಗಿರಿಸಿಕೊಂಡು, ರಷ್ಯಾವು ಶುಕ್ರವಾರ ಡಜನ್‌ಗೂ ಅಧಿಕ ಕ್ಷಿಪಣಿ, ಡ್ರೋನ್ ಬಳಸಿಕೊಂಡು ಬೃಹತ್ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಿತು.
ಪವರ್ ಗ್ರಿಡ್ ಮೇಲೆ ದಾಳಿ ನಡೆಸಿದ್ದನ್ನು ಉಕ್ರೇನ್‌ನ ಖಂಡಿಸಿದೆ.
'ಶತ್ರುಗಳು ಭಯೋತ್ಪಾದಕ ಕೃತ್ಯ ಮುಂದುವರಿಸಿದ್ದಾರೆ' ಎಂದು ಉಕ್ರೇನ್‌ನ ಇಂಧನ ಸಚಿವ ಹರ್ಮನ್ ಹಲುಶಛೆಂಕೊ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
'ದೇಶದ ವಿದ್ಯುತ್ ಸರಬರಾಜು ಜಾಲ ಸುಗಮಗೊಳಿಸಲು ಕಾರ್ಮಿಕರ ಅವಿರತ ಶ್ರಮಿಸುತ್ತಿದ್ದು, ಹಾನಿ ಪ್ರಮಾಣದ ಕುರಿತು ಸದ್ಯದಲ್ಲೇ ಮಾಹಿತಿ ನೀಡಲಾಗುವುದು' ಎಂದರು.
ಉಕ್ರೇನ್‌ನ ವಾಯುನೆಲೆಗಳನ್ನು ಗುರಿಯಾಗಿರಿಸಿಕೊಂಡು, ಗುರುವಾರ ರಾತ್ರಿಯಿಂದಲೇ ಡ್ರೋನ್, ಕ್ಷಿಪಣಿಗಳ ಸುರಿಮಳೆಗೈದಿತ್ತು. ಪಶ್ಚಿಮ ಭಾಗಕ್ಕೆ ಹೆಚ್ಚಿನ ಹಾನಿ ಮಾಡಲು ಬ್ಯಾಲಿಸ್ಟಿಕ್ 'ಕಿಂಝಾಲ್' ಕ್ಷಿಪಣಿ ದಾಳಿ ನಡೆಸಿತು. ಚಳಿಗಾಲದ ಸಂದರ್ಭದಲ್ಲೇ ವಿದ್ಯುತ್ ಉತ್ಪಾದನಾ ಘಟಕವನ್ನೇ ಹಾನಿಗೊಳಿಸುವ ಆಲೋಚನೆ ಹೊಂದಿದೆ.
ನ.28ರಂದು 200ಕ್ಕೂ ಅಧಿಕ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಬಳಸಿಕೊಂಡು, ವಿದ್ಯುತ್ ಉತ್ಪಾದನಾ ಕೇಂದ್ರದ ಮೇಲೆ ದಾಳಿ ನಡೆಸಿತ್ತು. ಇದರಿಂದ 10 ಲಕ್ಷಕ್ಕೂ ಅಧಿಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ರಷ್ಯಾ ಸಮರ್ಥನೆ: ರಷ್ಯಾದ ವಿರುದ್ಧ ಉಕ್ರೇನ್ ಪ್ರತಿ ದಾಳಿ ನಡೆಸಲು ಕ್ಷಿಪಣಿ, ಡ್ರೋನ್, ಶಸ್ತ್ರಸಜ್ಜಿತ ವಾಹನಗಳನ್ನು ತಯಾರಿಸುತ್ತಿದ್ದು, ಅವುಗಳನ್ನು ತಡೆಯುವ ಉದ್ದೇಶದಿಂದಲೇ ಈ ದಾಳಿ ನಡೆಸಿದ್ದೇವೆ ಎಂದು ರಷ್ಯಾ ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.