ನವದೆಹಲಿ: ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಕಡಿತಗೊಳಿಸಿ ಕಾಂಗ್ರೆಸ್ ಮುಸ್ಲಿಮರಿಗೆ ಹಂಚಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಶನಿವಾರ 'ಅಜೆಂಡಾ ಆಜ್ ತಕ್ 2024' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮುಂದೆ ದೇಶದಲ್ಲಿ ಈಗಿರುವ ಮೀಸಲಾತಿ ವ್ಯವಸ್ಥೆಯನ್ನು ಬದಲಿಸುವ ಯಾವುದೇ ಆಲೋಚನೆಯಿಲ್ಲ ಎಂದು ಹೇಳಿದ್ದಾರೆ.
'ಸಂವಿಧಾನವನ್ನು ಬದಲಿಸುತ್ತೇವೆ ಎಂದು ವಿಪಕ್ಷಗಳು ಹೇಳಿವೆ. ನಾವು ಮೀಸಲಾತಿಯನ್ನು ಮುಟ್ಟಿಲ್ಲ. ಎಸ್‌ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿಯನ್ನು ಕಡಿತಗೊಳಿಸಿ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿತು' ಎಂದು ಅವರು ಟೀಕಿಸಿದ್ದಾರೆ.
'ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ (2014, 2019, 2024) ಸೋತಿದೆ ಎಂಬುದನ್ನು ಕಾಂಗ್ರೆಸ್ ಮರೆಯಬಾರದು. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ರಾಹುಲ್ ಗಾಂಧಿ ದುರಹಂಕಾರಿಯಾಗಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
ಅಮೆರಿಕದ ನ್ಯಾಯಾಯಲದಲ್ಲಿ ಅದಾನಿ ಸಮೂಹದ ಮೇಲಿನ ದೋಷಾರೋಪಣೆ ಮತ್ತು ಗೌತಮ್ ಅದಾನಿ ಅವರೊಂದಿಗೆ ಮೋದಿ ಸರ್ಕಾರದ ನಂಟಿನ ಆರೋಪದ ಕುರಿತು ಪ್ರತಿಕ್ರಿಯಿಸಿದ ಅಮಿತ್ ಶಾ, 'ಯಾವುದೇ ಸರ್ಕಾರ ಮಾಧ್ಯಮ ವರದಿಗಳ ಆಧಾರದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ದಾಖಲೆಗಳು ಸಿಕ್ಕಿದಾಗ ನೋಡೋಣ' ಎಂದು ಪ್ರತಿಕ್ರಿಯಿಸಿದ್ದಾರೆ.
2026ರ ವೇಳೆಗೆ ಛತ್ತೀಸಗಢ ನಕ್ಸಲ್ ಮುಕ್ತವಾಗಲಿದೆ ಎಂದೂ ಅವರು ಹೇಳಿದ್ದಾರೆ.