ನವದೆಹಲಿ: ರಾಷ್ಟ್ರ ರಾಜಧಾನಿ ಪ್ರದೇಶದ ರಾಜ್ಯಗಳು 'ಬಹುಹಂತಗಳ ಪ್ರತಿಸ್ಪಂದನ ಕ್ರಿಯಾಯೋಜನೆ'ಯಿಂದ (ಜಿಆರ್‌ಎಪಿ-4) ತೊಂದರೆಗೆ ಒಳಗಾದ ದಿನಗೂಲಿ ಕಾರ್ಮಿಕರಿಗೆ ಜೀವನ ನಿರ್ವಹಣೆಗೆ ನೆರವು ಒದಗಿಸದೆ ಇರುವುದರ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.
ದೆಹಲಿ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತನ್ನ ಮುಂದೆ ವರ್ಚುವಲ್ ಆಗಿ ಹಾಜರಿರಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು, ವಾಯುಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಜಿಆರ್‌ಎಪಿ-4 ನಿರ್ಬಂಧಗಳನ್ನು ಸಡಿಲಿಸಲು ನಿರಾಕರಿಸಿತು.
ನಿರ್ಬಂಧಗಳನ್ನು ಸಡಿಲಿಸಲು ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಮಾಡಿರುವ ಪ್ರಸ್ತಾವಗಳನ್ನು ತಾನು ವಾಯು ಗುಣಮಟ್ಟ ಸೂಚ್ಯಂಕವನ್ನು ಗಮನಿಸಿ, ಗುರುವಾರ ಪರಿಶೀಲಿಸುವುದಾಗಿ ಪೀಠವು ಹೇಳಿದೆ.
ರಾಜ್ಯಗಳು ದಿನಗೂಲಿ ಕಾರ್ಮಿಕರಿಗೆ, ಕಾರ್ಮಿಕ ಸೆಸ್ ಮೂಲಕ ಸಂಗ್ರಹಿಸಿದ ನಿಧಿಯಿಂದ ಜೀವನ ನಿರ್ವಹಣೆಗೆ ನೆರವು ಒದಗಿಸದೆ ಇರುವುದರ ಬಗ್ಗೆ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತು. ಜಿಆರ್‌ಎಪಿ-4 ಕ್ರಮದ ಭಾಗವಾಗಿ ಕಟ್ಟಡ ನಿರ್ಮಾಣ ಕಾರ್ಯಗಳ ಮೇಲೆ ನಿಷೇಧ ಹೇರಿದ ಪರಿಣಾಮವಾಗಿ ದಿನಗೂಲಿ ಕಾರ್ಮಿಕರು ತೊಂದರೆಗೆ ಒಳಗಾಗಿದ್ದರು. ಹೀಗಾಗಿ ಇವರಿಗೆ ನೆರವು ಒದಗಿಸಬೇಕು ಎಂದು ಪೀಠವು ಸೂಚನೆ ನೀಡಿತ್ತು.
'ದೆಹಲಿ, ರಾಜಸ್ಥಾನ, ಪಂಜಾಬ್ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಜೀವನ ನಿರ್ವಹಣೆಗೆ ನೆರವು ನೀಡಬೇಕು ಎಂಬ ನಮ್ಮ ಆದೇಶವನ್ನು ಪಾಲಿಸಿರುವ ಬಗ್ಗೆ ಅನುಪಾಲನಾ ವರದಿಯನ್ನು ನೀಡಿಲ್ಲ. ಯಾರಿಗಾದರೂ ಜೀವನ ನಿರ್ವಹಣೆಗೆ ನೆರವು ಒದಗಿಸಿರುವ ಬಗ್ಗೆ ಇವು ನಮಗೆ ಮಾಹಿತಿ ನೀಡಿಲ್ಲ' ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು.
ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಹಣವನ್ನು ಪಾವತಿ ಮಾಡುವ ವಿಚಾರದಲ್ಲಿ ಆದೇಶದ ಪಾಲನೆಯು ಗಣನೀಯ ಮಟ್ಟದಲ್ಲಿ ಆಗದೆ ಇದ್ದರೆ ತಪ್ಪು ಮಾಡಿದ ಅಧಿಕಾರಿಗಳ ವಿರುದ್ದ ನ್ಯಾಯಾಂಗ ನಿಂದನೆ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸುವ ಬಗ್ಗೆ ಪರಿಶೀಲಿಸಬೇಕಾಗುತ್ತದೆ ಎಂದು ಪೀಠವು ಎಚ್ಚರಿಕೆ ನೀಡಿದೆ.