ನವದೆಹಲಿ: ಕೇರಳದ ಓಚ್ಚಿರ ಪರಬ್ರಹ್ಮ ದೇವಸ್ಥಾನ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ನಿರ್ವಹಣೆಗೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸಲು ಕೇರಳ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ರಾಮಕೃಷ್ಣನ್ ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ನೇಮಕ ಮಾಡಿದೆ.
ಈ ದೇವಸ್ಥಾನವು ವಿಶಿಷ್ಟವಾಗಿದೆ, ಇದು ಪುರಾತನವಾದುದು ಹಾಗೂ ಐತಿಹಾಸಿಕ ಮಹತ್ವ ಹೊಂದಿದೆ, 21.25 ಎಕರೆ ಪ್ರದೇಶದಲ್ಲಿ ಇದು ಇದೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಆರ್. ಮಹಾದೇವನ್ ಅವರು ಇರುವ ತ್ರಿಸದಸ್ಯ ಪೀಠವು ಹೇಳಿದೆ. ಅಲ್ಲದೆ, ದೇವಸ್ಥಾನದ ಅಧೀನದಲ್ಲಿ ಒಂದು ಆಸ್ಪತ್ರೆ, ನರ್ಸಿಂಗ್ ಕಾಲೇಜು ಕೂಡ ಇವೆ.
'ಹೀಗಿರುವಾಗ ದೇವಸ್ಥಾನ ಮತ್ತು ಅದರ ಆಸ್ತಿಗಳನ್ನು ಕಾಳಜಿಯಿಂದ ರಕ್ಷಿಸುವುದು ಅಗತ್ಯ' ಎಂದು ಪೀಠವು ಹೇಳಿದೆ. ನ್ಯಾಯಮೂರ್ತಿ ರಾಮಕೃಷ್ಣನ್ ಅವರು ಆಡಳಿತದ ಮುಖ್ಯಸ್ಥರಾಗಿ, ಚುನಾವಣಾ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ದೇವಸ್ಥಾನದ ಉಪ ನಿಯಮಗಳಿಗೆ ಅನುಗುಣವಾಗಿ ಚುನಾವಣೆಯನ್ನು ನಾಲ್ಕು ತಿಂಗಳಲ್ಲಿ ನಡೆಸಬೇಕು ಎಂದು ಪೀಠ ಸೂಚಿಸಿದೆ.
ಹೊಸದಾಗಿ ನೇಮಕ ಆಗಿರುವ ಆಡಳಿತದ ಮುಖ್ಯಸ್ಥರು ದೇವಸ್ಥಾನದ, ಸಮಿತಿಗಳ ಎಲ್ಲ ವ್ಯವಹಾರಗಳನ್ನು ಚುನಾವಣೆ ನಡೆಯುವವರೆಗೆ ನೋಡಿಕೊಳ್ಳಬೇಕು. ನಂತರ ಚುನಾಯಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸಬೇಕು ಎಂದು ಹೇಳಿದೆ.