ನವದೆಹಲಿ: ಅತ್ಯಾಚಾರ ಪ್ರಕರಣವೊಂದರಲ್ಲಿ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದ ನಂತರ ತಲೆಮರೆಸಿಕೊಂಡಿರುವ ತಿಮೊತಿ ಎಲ್. ಚಾಂಗ್‌ಸಾಂಗ್ ಎಂಬುವನನ್ನು ಪತ್ತೆ ಮಾಡುವಂತೆ ಮಣಿಪುರ ಹೈಕೋರ್ಟ್, ಸಿಬಿಐಗೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ರದ್ದುಪಡಿಸಿದೆ.
ಮಣಿಪುರ ಹೈಕೋರ್ಟ್‌ನ ಆದೇಶವು ಅನಗತ್ಯವಾಗಿತ್ತು ಎಂದು ಹೇಳಿರುವ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ಪೀಠವು, ಸಿಬಿಐ ಅಧಿಕಾರಿಗಳನ್ನು ಈ ಹೊಣೆಯಿಂದ ಮುಕ್ತಗೊಳಿಸಿದೆ.
ಈ ವ್ಯಕ್ತಿಯನ್ನು ಪತ್ತೆ ಮಾಡುವ ಕೆಲಸವನ್ನು ಮಣಿಪುರ ಪೊಲೀಸರು ಈಗಾಗಲೇ ಕೈಗೆತ್ತಿಕೊಂಡಿದ್ದಾರೆ ಎಂದು ಸಿಬಿಐ, ಮಣಿಪುರ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 'ರಾಜ್ಯ ಸರ್ಕಾರವು ಅಪರಾಧಿಯನ್ನು ಪತ್ತೆ ಮಾಡಲು ವಿಶೇಷ ತಂಡವೊಂದನ್ನು ರಚಿಸಿದೆ. ಹೀಗಾಗಿ, ಹೈಕೋರ್ಟ್ ನೀಡಿದ ಆದೇಶವು ಅನಗತ್ಯವಾಗಿತ್ತು... ಅಪರಾಧಿಯನ್ನು ಪತ್ತೆ ಮಾಡಲು ರಾಜ್ಯ ಸರ್ಕಾರವು ಎಲ್ಲ ಪ್ರಯತ್ನ ನಡೆಸಬೇಕು' ಎಂದು ಪೀಠವು ಹೇಳಿದೆ.
ಒಂದು ವೇಳೆ ಮಣಿಪುರ ಸರ್ಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಿದಲ್ಲಿ, ಕೇಂದ್ರವು ಎಲ್ಲ ಸಹಕಾರ ಒದಗಿಸಬೇಕು ಎಂದು ಸೂಚಿಸಿದೆ.