ನವದೆಹಲಿ : 'ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆ, ನಿಷೇಧ ಮತ್ತು ಪರಿಹಾರ) ಕಾಯ್ದೆ- 2013' ದೇಶದಾದ್ಯಂತ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಬೇಕು ಎಂಬ ಉದ್ದೇಶದಿಂದ ಸುಪ್ರೀಂ ಕೋರ್ಟ್, ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಈ ಸಂಬಂಧ ಮಂಗಳವಾರ ಕೆಲವು ನಿರ್ದೇಶನಗಳನ್ನು ನೀಡಿರುವ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇದ್ದ ವಿಭಾಗೀಯ ಪೀಠವು, ಕಾಯ್ದೆಯನ್ನು ದೇಶದ ಎಲ್ಲೆಡೆ ಏಕರೂಪದಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದೆ.
ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು ಪ್ರತಿ ಜಿಲ್ಲೆಗೆ ಒಬ್ಬ ಅಧಿಕಾರಿಯನ್ನು ಡಿಸೆಂಬರ್ 31ಕ್ಕೆ ಮೊದಲು ನೇಮಕ ಮಾಡಬೇಕು. ಆ ಅಧಿಕಾರಿಯು ಸ್ಥಳೀಯ ದೂರು ಸಮಿತಿಯನ್ನು ಜನವರಿ 31ಕ್ಕೆ ಮೊದಲು ರಚಿಸಬೇಕು, ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.
ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿಯನ್ನು ರಚಿಸಲಾಗಿದೆಯೇ ಎಂಬ ಬಗ್ಗೆ ಜಿಲ್ಲಾಧಿಕಾರಿಗಳು/ಜಿಲ್ಲಾ ಮ್ಯಾಜಿಸ್ಟ್ರೇಟರು ಸಮೀಕ್ಷೆ ನಡೆಸಬೇಕು, ವರದಿಯನ್ನು ಸಲ್ಲಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ತನ್ನ ಸೂಚನೆಗಳ ಪಾಲನೆಗೆ ಸುಪ್ರೀಂ ಕೋರ್ಟ್ ಮಾರ್ಚ್ 31ರವರೆಗೆ ಸಮಯಾವಕಾಶ ನೀಡಿದೆ, ಸೂಚನೆಗಳನ್ನು ಅನುಷ್ಠಾನಕ್ಕೆ ತರುವ ಕಾರ್ಯದ ಮೇಲೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿಗಾ ಇರಿಸಬೇಕು ಎಂದು ಹೇಳಿದೆ.
ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಆರೋಪಗಳನ್ನು ತನಿಖೆ ಮಾಡಲು ಸಮಿತಿಗಳನ್ನು ಎಲ್ಲ ಸಚಿವಾಲಯ ಹಾಗೂ ಇಲಾಖೆಗಳಲ್ಲಿ ರಚಿಸಲಾಗಿದೆಯೇ ಎಂಬುದನ್ನು ಕಾಲಮಿತಿಯಲ್ಲಿ ಪರಿಶೀಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ 2023ರ ಮೇ ತಿಂಗಳಲ್ಲಿ ಕೋರ್ಟ್ ಸೂಚಿಸಿತ್ತು. ಇದರ ಅನುಷ್ಠಾನಕ್ಕೆ ಸಂಬಂಧಿಸಿದ ಒಂದು ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಸೂಚನೆಗಳನ್ನು ನೀಡಿದೆ.
2013ರ ಕಾಯ್ದೆಯ ಅನುಷ್ಠಾನದ ವಿಚಾರದಲ್ಲಿ ದೀರ್ಘ ಅವಧಿಯಿಂದ ಗಂಭೀರ ಲೋಪಗಳು ಉಳಿದಿರುವುದು ಆತಂಕ ಉಂಟುಮಾಡುವ ವಿಚಾರ ಎಂದು ಸುಪ್ರೀಂ ಕೋರ್ಟ್ ಹೇಳಿದೆ.