ನವದೆಹಲಿ: ಕೇಂದ್ರ ಸಚಿವ ಎಲ್.ಮುರುಗನ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಚೆನ್ನೈ ಮೂಲದ ಮುರಸೋಲಿ ಟ್ರಸ್ಟ್ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
ಮುರುಗನ್ ಅವರು 2020ರ ಡಿಸೆಂಬರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಟ್ರಸ್ಟ್ ಆರೋಪಿಸಿತ್ತು.
ಟ್ರಸ್ಟ್‌ಗೆ ಅವಹೇಳನ ಮಾಡುವ ಅಥವಾ ಯಾವುದೇ ರೀತಿಯಲ್ಲಿ ಹಾನಿಮಾಡುವ ಉದ್ದೇಶ ಸಚಿವರಿಗಿಲ್ಲ ಎಂದು ಮುರುಗನ್ ಪರ ವಕೀಲರು ಕೋರ್ಟ್‌ಗೆ ತಿಳಿಸಿದರು. ವಾದ ಆಲಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಮಾನನಷ್ಟ ಮೊಕದ್ದಮೆಯನ್ನು ರದ್ದು ಮಾಡಬೇಕು ಎಂದು ಕೋರಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್, 2023ರ ಸೆಪ್ಟೆಂಬರ್ 5ರಂದು ರದ್ದು ಮಾಡಿತ್ತು.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾಗಿರುವ ಮುರುಗನ್ ಅವರು ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.