ಕೊಚ್ಚಿ: ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ 2021ರ ಡಿಸೆಂಬರ್‌ನಲ್ಲಿ ನಡೆದ ಎಸ್‌ಡಿಪಿಐ ಮುಖಂಡನ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಐವರು ಸದಸ್ಯರಿಗೆ ನೀಡಲಾಗಿದ್ದ ಜಾಮೀನನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.
ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಅಲಪ್ಪುಳದ 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆಯನ್ನು ನ್ಯಾ. ಬೆಚು ಕುರಿಯನ್ ಥಾಮಸ್ ನಡೆಸಿ, ಜಾಮೀನು ರದ್ದುಗೊಳಿಸಿದರು. ಜತೆಗೆ ಕೆಲವು ಆರೋಪಿಗಳಿಗೆ ಕೆಳ ಹಂತದ ನ್ಯಾಯಾಲಯವು ಯಾಂತ್ರಿಕವಾಗಿ ಜಾಮೀನು ನೀಡಿದೆ ಎಂದೂ ಅಭಿಪ್ರಾಯಪಟ್ಟರು.
ಆರ್‌ಎಸ್‌ಎಸ್ ಮುಖಂಡನ ಹತ್ಯೆಗೆ ಸಂಬಂಧಿಸಿದಂತೆ ಶಾನ್ ವಿರುದ್ಧ ಸಂಘದ ಸದಸ್ಯರು ದ್ವೇಷದಿಂದ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್ ವಾದಿಸಿತು. 2021ರ ಡಿ. 8ರಂದು ಶಾನ್ ಪ್ರಯಾಣಿಸುತ್ತಿದ್ದ ವಾಹನವನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡ ಶಾನ್ ರಾತ್ರಿ ಮೃತಪಟ್ಟಿದ್ದರು ಎಂದು ವಾದದಲ್ಲಿ ಹೇಳಲಾಗಿತ್ತು.