ಡಿಸೆಂಬರ್ 4ರಂದು ನಟ ಅಲ್ಲು ಅರ್ಜುನ್ ಚಿತ್ರಮಂದಿರಕ್ಕೆ ಬರುವ ಮುನ್ನವೇ ಕಾಲ್ತುಳಿತ ನಡೆದಿದೆ ಎಂದು ಕೆಲವರು ಸುಳ್ಳು ವಿಡಿಯೊ ಪೋಸ್ಟ್ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು 'ಎಕ್ಸ್'ನಲ್ಲಿ ಹೈದರಾಬಾದ್ ಪೊಲೀಸ್ ತಿಳಿಸಿದೆ.
ತನಿಖೆ ನಂತರದ ನೈಜ ವಿಡಿಯೊವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೂ ಅಲ್ಲು ಅರ್ಜುನ್ ಬರುವ ಮೊದಲೇ ಕಾಲ್ತುಳಿತ ಸಂಭವಿಸಿದೆ ಎಂದು ಕೆಲವರು ಉದ್ದೇಶಪೂರ್ವಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೂ ಪೋಸ್ಟ್ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿರುವಾಗ ಈ ರೀತಿಯಾಗಿ ತಪ್ಪು ಮಾಹಿತಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಲಾಖೆಗೆ ಮಾನಹಾನಿಯನ್ನುಂಟು ಮಾಡುವ ರೀತಿಯಲ್ಲಿ ಅಪಪ್ರಚಾರ ನಡೆಸಿದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿದೆ.
ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿರುವ ಪೊಲೀಸರು, ಈ ಪ್ರಕರಣ ಸಂಬಂಧ ಏನೇ ಪುರಾವೆಗಳು ಇದ್ದರೂ ಮಾಹಿತಿಯನ್ನು ಇಲಾಖೆಗೆ ಹಸ್ತಾಂತರಿಸಬಹುದು ಎಂದು ವಿನಂತಿ ಮಾಡಿದೆ.
ಘಟನೆಯಲ್ಲಿ 35 ವರ್ಷದ ಮಹಿಳೆ ಮೃತಪಟ್ಟಿದ್ದರೆ ಆಕೆಯ ಮಗ ಗಂಭೀರವಾಗಿ ಗಾಯಗೊಂಡಿದ್ದನು. ಪ್ರಕರಣ ಸಂಬಂಧ ಅಲ್ಲು ಅರ್ಜುನ್, ನಟನ ಭದ್ರತಾ ತಂಡ ಮತ್ತು ಚಿತ್ರಮಂದಿರದ ಮ್ಯಾನೇಜ್‌ಮೆಂಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಡಿಸೆಂಬರ್ 13ರಂದು ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಡಿ.14ರಂದು ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ಅಲ್ಲು ಅರ್ಜುನ್ ಅವರನ್ನು ಮೂರು ತಾಸಿಗೂ ಹೆಚ್ಚು ಹೊತ್ತು ವಿಚಾರಣೆಗೆ ಒಳಪಡಿಸಲಾಗಿತ್ತು.