ಮುಂಬ್ಯೆ:ಭಾರತೀಯ ಷೇರುಪೇಟೆ ನಿನ್ನೆ (ಡಿಸೆಂಬರ್ 19) ಕ್ಲೋಸಿಂಗ್ ಬೆಲ್ ಸಮಯದಲ್ಲಿ ಮಹಾ ಕುಸಿತಕ್ಕೆ ಸಾಕ್ಷಿಯಾಗಿದೆ. ಅಮೆರಿಕದ ಫೆಡರಲ್ ಬ್ಯಾಂಕ್‌ನ ಬಡ್ಡಿದರ ಕಡಿತ ಮಾಡುವ ನಿರ್ಧಾರದ ಬಳಿಕ ಜಾಗತಿಕ ಷೇರುಪೇಟೆಗಳಲ್ಲಿ ಷೇರುಗಳ ಮಾರಾಟ ಗಮನಾರ್ಹವಾಗಿ ಹೆಚ್ಚಾಗಿರುವುದು ಭಾರತೀಯ ಷೇರುಪೇಟೆಯಲ್ಲೂ ಪರಿಣಾಮ ಬೀರಿದೆ.
ಮುಂಬೈ ಷೇರು ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ ಸುಮಾರು 965 ಪಾಯಿಂಟ್‌ಗಳನ್ನು ಕುಸಿದು 80,000 ಮಟ್ಟಕ್ಕಿಂತ ಕಡಿಮೆಗೆ ತಲುಪಿದೆ. ಇದೇ ಸಮಯದಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಹೊರಹರಿವು ಹೆಚ್ಚಾಗಿರುವುದು, ಗ್ರಾಹಕ ವಸ್ತುಗಳು, ಬ್ಯಾಂಕಿಂಗ್ ಮತ್ತು ಐಟಿ ಷೇರುಗಳು ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಂಡಿರುವುದು ಕೂಡ ಷೇರುಪೇಟೆಯ ಪತನಕ್ಕೆ ಕಾರಣವಾಯಿತು.
30-ಷೇರುಗಳ ಬಿಎಸ್‌ಇ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 964.15 ಪಾಯಿಂಟ್ ಅಥವಾ 1.20 ಶೇಕಡಾ ಕುಸಿದು 79,218.05 ಕ್ಕೆ ಸ್ಥಿರವಾಗಿದೆ. ಬ್ಲೂ-ಚಿಪ್ ಸೂಚ್ಯಂಕವು 1,162.12 ಪಾಯಿಂಟ್‌ಗಳನ್ನು ಅಥವಾ 1.44 ಶೇಕಡಾವನ್ನು 79,020.08 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 247.15 ಪಾಯಿಂಟ್‌ಗಳು ಅಥವಾ 1.02 ಶೇಕಡಾ ಕುಸಿದು 24,000 ಮಾರ್ಕ್‌ಗಿಂತ ಕೆಳಗೆ 23,951.70 ಕ್ಕೆ ಕುಸಿಯಿತು.
ಕುಸಿತಕ್ಕೆ ಏನು ಕಾರಣ?
"ಬಡ್ಡಿದರಗಳ ಕುರಿತಾಗಿ ಅಮೆರಿಕದ ಫೆಡರಲ್ ಬ್ಯಾಂಕ್ ತೆಗೆದುಕೊಂಡ ನಿಲುವು ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲೂ ತೀವ್ರ ಕುಸಿತ ದಾಖಲಾಗಿದೆ. ಬ್ಯಾಂಕಿಂಗ್ ಮತ್ತು ರಿಯಲ್ ಎಸ್ಟೇಟ್ ಮುಂತಾದ ಬಡ್ಡಿದರಗಳಿಗೆ ಸಂವೇದನಶೀಲವಾಗಿರುವ ವಲಯಗಳ ಮೇಲೆ ಹೆಚ್ಚಿನ ಪರಿಣಾಮ ಕಂಡುಬಂದಿವೆ" ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.
"ಬಡ್ಡಿದರವನ್ನು ಸ್ಥಿರವಾಗಿಡಲು ನಿರ್ಧರಿಸಿರುವುದು ಆರ್ಥಿಕ ತಜ್ಞರನ್ನು ಆಶ್ಚರ್ಯಗೊಳಿಸಿದೆ. ಇದು ಮಾರಾಟದ ಒತ್ತಡ ಕಡಿಮೆ ಮಾಡಲು ನೆರವಾಗಿದೆ. ಎಫ್‌ಐಐ ಮಾರಾಟ ಹೆಚ್ಚಳವೂ ಹೂಡಿಕೆದಾರರನ್ನು ಎಚ್ಚರಿಸಿದೆ. ಈ ಸಮಯದಲ್ಲಿ ಫಾರ್ಮಾದಂತಹ ರಕ್ಷಣಾತ್ಮಕ ಕ್ಷೇತ್ರಗಳತ್ತ ಹೂಡಿಕೆ ಹೆಚ್ಚಳವಾಗಿದೆ" ಎದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸ್‌ನ ಸಂಶೋಧನಾ ಮುಖ್ಯಸ್ಥರಾದ ವಿನೋದ್ ನಾಯರ್ ಹೇಳಿದ್ದಾರೆ.
30 ಬ್ಲೂ-ಚಿಪ್ ಷೇರುಗಳಲ್ಲಿ ಇನ್ಫೋಸಿಸ್, ಬಜಾಜ್ ಫಿನ್‌ಸರ್ವ್, ಜೆಎಸ್‌ಡಬ್ಲ್ಯೂ ಸ್ಟೀಲ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಇನ್ಫೋಸಿಸ್, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಮತ್ತು ಮಹೀಂದ್ರಾ ಷೇರುಗಳು ಕುಸಿತ ದಾಖಲಿಸಿವೆ. ಮತ್ತೊಂದೆಡೆ ಸನ್ ಫಾರ್ಮಾ, ಪವರ್ ಗ್ರಿಡ್ ಮತ್ತು ಹಿಂದೂಸ್ತಾನ್ ಯುನಿಲಿವರ್ ಏರಿಕೆ ದಾಖಲಿಸಿವೆ.
ಏಷ್ಯನ್ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೋ, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ದಾಖಲಿಸಿವೆ. ಯುರೋಪಿಯನ್ ಮಾರುಕಟ್ಟೆಗಳು ನಕಾರಾತ್ಮಕ ವಹಿವಾಟು ನಡೆಸುತ್ತಿದ್ದವು. ವಾಲ್ ಸ್ಟ್ರೀಟ್ ಬುಧವಾರ ತೀವ್ರ ಕುಸಿತದೊಂದಿಗೆ ಕೊನೆಗೊಂಡಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 1,316.81 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.08 ರಷ್ಟು ಕುಸಿದು ಬ್ಯಾರೆಲ್‌ಗೆ 73.33 ಡಾಲರ್‌ಗೆ ತಲುಪಿದೆ.