ಆಫ್ರಿಕಾ: ಇದು ಕಡಲಾಳದಲ್ಲಿ ಜೀವಿಸುತ್ತಿರುವ ತಿಮಿಂಗಿಲವೊಂದರ (Whale) ಅಪರೂಪದ 'ಲವ್ ಸ್ಟೋರಿ' (Love Story)! ಜನರು ತಮ್ಮ ಪ್ರಿತಿ ಪಾತ್ರರನ್ನು ಹುಡುಕಿಕೊಂಡು ಕಿಲೋಮೀಟರ್ ಗಟ್ಟಲೆ ಪ್ರಯಾಣಿಸಿರುವುದನ್ನು ಅಥವಾ ದೇಶ-ದೇಶಗಳಳನ್ನು ದಾಟಿ ತಮ್ಮ ಪ್ರಿತಿ ಪಾತ್ರರನ್ನು ಸೇರಿಕೊಳ್ಳುವ ಕಥೆಗಳನ್ನು ನಾವು ಕೇಳಿರುತ್ತೇವೆ.
ಈ ಗಂಡು ಹಂಪ್ ಬ್ಯಾಕ್ ತಿಮಿಂಗಿಲ (humpback whale) 2013ರಲ್ಲಿ ಕೊಲಂಬಿಯಾದ (Colombia) ಪೆಸಿಫಿಕ್ ಸಾಗರದ (Pacific Ocean) ಸುತ್ತಮುತ್ತ ಕಂಡುಬಂದಿತ್ತು, ಇದೀಗ ಇದೇ ತಿಮಿಂಗಿಲವು ಹಿಂದೂ ಮಹಾಸಾಗರದ (Indian Ocean) ಝಂಝಿಬಾರ್ (Zanzibar) ಸಮೀಪ ಪತ್ತೆಯಾಗಿದ್ದು, ಇಷ್ಟು ವರ್ಷಗಳಲ್ಲಿ ಇದು 13.046 ಕಿಲೋಮೀಟರ್ ಗಳಷ್ಟು ದೂರವನ್ನು ಸಾಗರ ಮಾರ್ಗದಲ್ಲಿ ಈಜಿಕೊಂಡು ಇಲ್ಲಿಗೆ ಬಂದಿದೆ ಎಂದು ಅಂದಾಜಿಸಲಾಗಿದೆ.
ಆಫ್ರಿಕಾದ (Africa) ಝಂಝಿಬಾರ್ ಸಮೀಪ ಈ ತಿಮಿಂಗಿಲ ಕೊನೆಯ ಬಾರಿಗೆ ಕಾಣಿಸಿಕೊಳ್ಳುವುದರೊಂದಿಗೆ, 2013 ರಿಂದ 2022ರವರೆ ಇದು ಕ್ರಮಿಸಿದ 13 ಸಾವಿರ ಕಿಲೋಮೀಟರ್ ಗಳ ಸಾಗರ ಪಯಣ ತಿಮಿಂಗಿಲ ಪ್ರಬೇಧಗಳಲ್ಲೇ ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಈ ತಿಮಿಂಗಿಲದ ಸುದೀರ್ಘ ಪಯಣವು ಒಂದು ತಿಮಿಂಗಿಲ ಕ್ರಮಿಸಿದ ಅತೀ ದೀರ್ಘವಾದ ದೂರವೆಂಬ ದಾಖಲೆಯನ್ನು ಬರೆದಿದೆ ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ. ಮಾತ್ರವಲ್ಲದೇ, ಈ ತಿಮಿಂಗಿಲದ ಸುದೀರ್ಘ ಪಯಣವು 'ವಯಸ್ಕ ಗಂಡು ಹಂಪ್ ಬ್ಯಾಕ್ ಪೆಸಿಪಿಕ್ ಸಾಗರ ಮತ್ತು ಹಿಂದೂ ಮಹಾಸಾಗರ ನಡುವೆ ಕೈಗೊಂಡ ಪ್ರಯಾಣದ ಮೊದಲ ದಾಖಲೀಕರಣ'ವೂ ಇದಾಗಿದೆ. ಯಾವುದೇ ಸಸ್ತನಿಯು ತನ್ನ ಜೀವಿತಾವಧಿಯಲ್ಲಿ ಕೈಗೊಂಡ ಸುದೀರ್ಘ ವಲಸೆ ಈ ತಿಮಿಂಗಲದ್ದಾಗಿದೆ ಎಂಬ ಅಂಶವೂ ಈ ಅಧ್ಯಯನದ ಮೂಲಕ ಹೊರಬಿದ್ದಿದೆ.
ಪೂರ್ವ ಪೆಸಿಫಿಕ್ (ಸ್ಟಾಕ್ ಜಿ) ಮತ್ತು ನೈಋತ್ಯ ಹಿಂದೂ ಮಹಾಸಾಗರ (ಸ್ಟಾಕ್ ಸಿ) ಎಂಬ ಎರಡು ಸಂತಾನೊತ್ಪತ್ತಿ ಸ್ಟಾಕ್ ಗಳ ನಡುವೆ ವಯಸ್ಕ ಹಂಪ್ ಬ್ಯಾಕ್ ತಿಮಿಂಗಿಲವೊಂದು ಪಯಣಿಸಿದ ಸುದೀರ್ಘ ಪಯಣದ ದಾಖಲೀಕರಣ ಇದಾಗಿದೆ. ಈ ಎರಡು ಸ್ಟಾಕ್ ಗಳು ಕನಿಷ್ಟ 120 ಡಿಗ್ರಿ ಎತ್ತರದಲ್ಲಿ ಪ್ರತ್ಯೇಕಿಸಲ್ಪಟ್ಟಿವೆ ಮತ್ತು ಈ ದೂರ 13046 ಕಿಲೋಮೀಟರ್ ಗಳಷ್ಟಿದೆ, ಈ ಅಧ್ಯಯನ ವರದಿಯು ಈ ತಿಮಿಂಗಿಲದ ದಾಖಲೆ ಈಜಾಟ ಪಯಣದ ಇನ್ನಷ್ಟು ರೋಚಕ ಮಾಹಿತಿಗಳನ್ನು ಬಹಿರಂಗಗೊಳಿಸಿದೆ.
ಈ ತಿಮಿಂಗಿಲದ ಇಷ್ಟು ದೂರ ಪ್ರಯಾಣಕ್ಕೆ ಖಚಿತ ಕಾರಣಗಳು ಲಭ್ಯವಾಗಿಲ್ಲವಾದರೂ, ಈ ಜಲ ಸಸ್ತನಿಯು ತನಗೊಂದು ಸೂಕ್ತ ಸಂಗಾತಿಯನ್ನು ಅರಸಿಕೊಂಡು ಇಷ್ಟು ದೂರ ಪ್ರಯಾಣಿಸರಬಹುದು ಎಂದು ಅಂದಾಜಿಸಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ 90ರ ದಶಕದಲ್ಲಿ ಹೆಣ್ಣು ಹಂಪ್ ಬ್ಯಾಕ್ ತಿಮಿಂಗಿಲವೊಂದು ಇದೇ ರೀತಿಯಾಗಿ ಸುದೀರ್ಘ ವಲಸೆ ಕೈಗೊಂಡಿರುವುದು ದಾಖಲೆಯಾಗಿದೆ. 1996ರಲ್ಲಿ ಹೆಣ್ಣು ಹಂಪ್ ಬ್ಯಾಕ್ ತಿಮಿಂಗಿಲವೊಂದು ಈಕ್ವೆಡಾರ್ ನ ಸಂತಾನೋತ್ಪತ್ತಿ ಪ್ರದೇಶದಲ್ಲಿ ಫೊಟೋದಲ್ಲಿ ಸೆರೆಯಾಗಿತ್ತು. ಬಳಿಕ, ಇದೇ ತಿಮಿಂಗಿಲ 1998ರಲ್ಲಿ ಬ್ರಝಿಲ್ ಬಳಿಯ ಸಾಗರದಲ್ಲಿ ಕಣ್ಣಿಗೆ ಕಾಣಿಸಿಕೊಳ್ಳುವ ಮೂಲಕ ಸುಮಾರು 12 ಸಾವಿರ ಕಿಲೋಮೀಟರ್ ಗಳಷ್ಟು ದೂರ ಸಾಗರ ಪ್ರಯಾಣ ಕೈಗೊಂಡಿತ್ತು.