ವಿಶ್ವಸಂಸ್ಥೆ: ಪೂರ್ವ ಜೆರುಸಲೇಂ ಸೇರಿದಂತೆ 1967ರಿಂದ ಆಕ್ರಮಿಸಿಕೊಂಡಿರುವ ಪ್ಯಾಲೆಸ್ಟೀನ್ ಭೂಪ್ರದೇಶದಿಂದ ಇಸ್ರೇಲ್ ಸೇನಾಪಡೆಗಳನ್ನು ಹಿಂಪಡೆಯಲು ಕರೆ ನೀಡುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿ ಸ್ಥಾಪಿಸಬೇಕೆಂಬ ಕರೆಯನ್ನು ಭಾರತ ಪುನರುಚ್ಚರಿಸಿದೆ.
'ಪ್ಯಾಲೆಸ್ಟೀನ್ ಪ್ರಶ್ನೆಯ ಶಾಂತಿಯುತ ಇತ್ಯರ್ಥ' ಎಂಬ ನಿರ್ಣಯವನ್ನು ಇಂದು (ಬುಧವಾರ) 193 ಸದಸ್ಯರ ಸಾಮಾನ್ಯ ಅಂಗೀಕರಿಸಲಾಗಿದೆ.
ನಿರ್ಣಯದ ಪರವಾಗಿ ಭಾರತ ಸೇರಿದಂತೆ 157 ರಾಷ್ಟ್ರಗಳು ಮತ ಚಲಾಯಿಸಿವೆ. ಅಮೆರಿಕ ಸೇರಿದಂತೆ ಅರ್ಜೆಂಟೀನಾ, ಹಂಗೇರಿ, ಇಸ್ರೇಲ್, ಮೈಕ್ರೋನೇಶಿಯಾ, ನೌರು, ಪಲಾವ್, ಪಪುವಾ ನ್ಯೂಗಿನಿಯಾ ರಾಷ್ಟ್ರಗಳು ನಿರ್ಣಯದ ವಿರುದ್ಧ ಮತ ಹಾಕಿವೆ.
ಕ್ಯಾಮರೂನ್, ಜೆಕಿಯಾ, ಈಕ್ವೆಡಾರ್, ಜಾರ್ಜಿಯಾ, ಪರಾಗ್ವೆ, ಉಕ್ರೇನ್ ಮತ್ತು ಉರುಗ್ವೆ ತಟಸ್ಥವಾಗಿ ಉಳಿದಿವೆ.
ಗಾಜಾದಲ್ಲಿ, ಇಸ್ರೇಲ್ ಮತ್ತು ಹಮಾಸ್ ನಡುವಿನ ಸುಮಾರು 14 ತಿಂಗಳ ಯುದ್ಧದಲ್ಲಿ 44,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 1.04 ಲಕ್ಷಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.
ಇತ್ತ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಣ ಸಂಘರ್ಷವು ಕಳೆದ ವರ್ಷ ಆರಂಭವಾಗಿದ್ದು, ಲೆಬನಾನ್‌ನಲ್ಲಿ ಕನಿಷ್ಠ 4,000 ಮಂದಿ ಮೃತಪಟ್ಟಿದ್ದಾರೆ. 13,150 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವರದಿ ಹೇಳಿದೆ.