ಲಖನೌ: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆಯುವಂತೆ ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಬೃಹತ್ ಗಾತ್ರದಲ್ಲಿ ಕಂಚು ಸೇರಿದಂತೆ ಇತರೆ ಲೋಹಗಳಿಂದ ನಿರ್ಮಿಸಲಾಗಿರುವ ಶಿವನ 'ಡಮರು' ಮತ್ತು 'ತ್ರಿಶೂಲ'ವನ್ನು ಕಣ್ತುಂಬಿಕೊಳ್ಳುವಂತೆ ಜನರನ್ನು ಕೋರಿದೆ.
ಜನಪದ ನಂಬಿಕೆಯ ಮಹಾನ್ ಹಬ್ಬವಾದ 'ಪ್ರಯಾಗ್ ರಾಜ್ ಮಹಾಕುಂಭ'ಕ್ಕೆ ಬರುವ ಭಕ್ತರಿಗೆ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಪೋಸ್ಟ್‌ನಲ್ಲಿ ಹೇಳಿದೆ.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ ಮೇಳವು ಜನವರಿ 13ರಿಂದ ಫೆಬ್ರುವರಿ 26ರವರೆಗೆ ನಡೆಯಲಿದೆ. ಮಹಾಕುಂಭದಲ್ಲಿ ಸುಮಾರು 45 ಕೋಟಿ ಯಾತ್ರಿಕರು ಭಾಗವಹಿಸುವ ನಿರೀಕ್ಷೆ ಇದೆ.
ಮಹಾಕುಂಭ ಮೇಳಕ್ಕೆ ಆಗಮಿಸುವ ಯಾತ್ರಿಕರ ಸುರಕ್ಷತೆಗಾಗಿ ಪ್ರಯಾಗರಾಜ್‌ನಾದ್ಯಂತ 50,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಪ್ರಯಾಗರಾಜ್‌ನಲ್ಲಿ ನಡೆಯುವ ಕುಂಭಮೇಳ ಹಾಗೂ ಮಹಾ ಕುಂಭಕ್ಕೆ ಕೋಟ್ಯಂತರ ಯಾತ್ರಿಕರು ಭೇಟಿ ನೀಡುವುದು ವಾಡಿಕೆ. ಆದರೆ ಸುಧಾರಿತ ತಂತ್ರಜ್ಞಾನದ ಕೊರತೆಯಿಂದಾಗಿ, ಮೇಳಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯನ್ನು ಲೆಕ್ಕ ಹಾಕುವುದು ಈವರೆಗೆ ಸವಾಲಾಗಿತ್ತು. ಹಾಗಾಗಿ, ಈ ಬಾರಿ ಎ.ಐ ಆಧಾರಿತ 2,700 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸುತ್ತಿದ್ದು, ಯಾತ್ರಿಕರ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಲಿದೆ' ಎಂದು ತಿಳಿಸಿದ್ದಾರೆ.
ಮಹಿಳೆಯರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಮಹಿಳಾ ಪೊಲೀಸ್ ಠಾಣೆಗಳು, 10 ಪಿಂಕ್ ಬೂತ್‌ಗಳು ಮತ್ತು ಮಹಿಳಾ ಪೊಲೀಸ್ ಪಡೆಯ ದೊಡ್ಡ ತುಕಡಿಯನ್ನು ನಿಯೋಜಿಸಲಾಗುವುದು ಎಂದಿದ್ದಾರೆ.