ವಾಷಿಂಗ್ಟನ್: ಮಹಾರಾಷ್ಟ್ರದ ಹಿಂದುಳಿದ ಜಿಲ್ಲೆಗಳ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಅಂದಾಜು ₹ 1,592 ಕೋಟಿ ಸಾಲ ನೀಡಲು ವಿಶ್ವಬ್ಯಾಂಕ್ ಅನುಮೋದನೆ ನೀಡಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವಬ್ಯಾಂಕ್, ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಯೋಜನೆ ಮತ್ತು ಬೆಳವಣಿಗೆ ಕಾರ್ಯತಂತ್ರಗಳಿಗೆ ಅನುವು ಮಾಡಿಕೊಡಲು, ಸಾಂಸ್ಥಿಕ ಸಾಮರ್ಥ್ಯಗಳನ್ನು ಬಲಪಡಿಸಲು ನೆರವು ನೀಡಲಾಗುವುದು ಎಂದು ತಿಳಿಸಿದೆ.
ಕಾರ್ಯಾಚರಣೆಯ ಅಡಿಯಲ್ಲಿ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲಾಗುವುದು. ಅಲ್ಲಿನ ವ್ಯವಹಾರಗಳಲ್ಲಿ, ಮುಖ್ಯವಾಗಿ ಪ್ರವಾಸೋದ್ಯಮದಂತಹ ಚಟುವಟಿಕೆಗಳಲ್ಲಿ ಇ-ಸರ್ಕಾರ ಸೇವೆಗಳನ್ನು ಸುಧಾರಿಸಿ, ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸಲಾಗುವುದು. ಆರ್ಥಿಕ ಅಭಿವೃದ್ಧಿಯಲ್ಲಿ ಲಿಂಗ ಅಸಮಾನತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
'ಜಿಲ್ಲಾ ಮಟ್ಟದಲ್ಲಿ ಸಾಂಸ್ಥಿಕ ಸಾಮರ್ಥ್ಯ ವೃದ್ಧಿ ಹಾಗೂ ಸಮನ್ವಯ ಸಾಧಿಸಲು ಬಂಡವಾಳ ಒದಗಿಸುವ ಮೂಲಕ, ಈ ಕಾರ್ಯಕ್ರಮವು ಯೋಜನೆ ಹಾಗೂ ಅದರ ನೀತಿ ನಿರೂಪಣೆ, ಖಾಸಗಿ ಸಹಭಾಗಿತ್ವದೊಂದಿಗೆ ಸಾರ್ವಜನಿಕ ವಲಯದಲ್ಲಿ ಸೇವೆಗಳನ್ನು ಸುಧಾರಿಸಲಿದೆ. ಇವೆಲ್ಲವೂ, ಮುಖ್ಯವಾಗಿ ಹಿಂದುಳಿದ ಜಿಲ್ಲೆಗಳ ಬೆಳವಣಿಗೆಗೆ ಆಧಾರವಾಗಲಿವೆ' ಎಂದು ವಿಶ್ವಬ್ಯಾಂಕ್‌ನ ಭಾರತದ ನಿರ್ದೇಶಕ ಅಗಸ್ಟೆ ತನೊ ಕೌಮೆ ಹೇಳಿದ್ದಾರೆ.