ಶಬರಿಮಲೆ: ಮಕರಸಂಕ್ರಮಣ ಪೂಜೆಗಾಗಿ ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲದ ಗರ್ಭಗುಡಿ ಬಾಗಿಲು ತೆರೆದುಕೊಂಡ ಸೋಮವಾರದಂದು 66394ಮಂದಿ ಭಕ್ತಾದಿಗಳು ಶ್ರೀದೇವರ ದರ್ಶನ ಪಡೆದುಕೊಂಡರು. ಇವರಲ್ಲಿ 15655 ಮಂದಿ ಸ್ಪಾಟ್ ಬುಕ್ಕಿಂಗ್ ಮೂಲಕ ದರ್ಶನ ಪಡೆದುಕೊಂಡಿದ್ದರು. 3479ಮಂದಿ ಪುಲ್‍ಮೇಡ್ ಪಾರಂಪರಿಕ ಹಾದಿ ಮೂಲಕ ದರ್ಶನಕ್ಕೆ ಆಗಮಿಸಿದ್ದರು. ಮಂಗಳವಾರ ಬೆಳಗ್ಗಿನಿಂದಲೇ ಭಕ್ತಾದಿಗಳ ದಟ್ಟಣೆ ಹೆಚ್ಚಾಗಿತ್ತು.
ಇತರ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳ ಸಂಖ್ಯೆ ಪರಿಗಣಿಸಿ ಪಂಪೆಯಲ್ಲಿ ಸ್ಪಾಟ್ ಬುಕ್ಕಿಂಗ್‍ನ ಹತ್ತು ಕೇಂದ್ರಗಳನ್ನು ತೆರೆಯಲಾಗಿದೆ. ಶಬರಿಮಲೆಯಲ್ಲಿ ಸುರಕ್ಷಾ ಪ್ರಕ್ರಿಯೆ ಮತ್ತಷ್ಟು ಬಲಪಡಿಸಲಾಗಿದ್ದು, ಶಬರಿಮಲೆ ಸುರಕ್ಷತೆಗಿರುವ ಐದನೇ ಬ್ಯಾಚ್ ತಿರುವನಂತಪುರದಿಂದ ಸನ್ನಿಧಾನ ತಲುಪಿದೆ. ಕ್ರೈಂ ಬ್ರಾಂಚ್ ಎಸ್.ಪಿ ಮಧುಸೂದನನ್ ನೇತೃತ್ವದ ತಂಡಕ್ಕೆ ಸನ್ನಿದಾನದ ಸುರಕ್ಷತಾ ಜವಾಬ್ದಾರಿ ವಹಿಸಿಕೊಡಲಾಗಿದೆ.
ತಿರುವಾಭರಣ ಘೋಷಯಾತ್ರೆ:
ಜ. 12ರಂದು ಪಂದಳಂ ಅರಮನೆ ರಾಜಕುಟುಂಬದ ಪ್ರತಿನಿಧಿಯ ಉಪಸ್ಥಿತಿಯಲ್ಲಿ ಆಚಾರಾನುಷ್ಠಾನಗಳ ನಂತರ ಪಂದಳಂ ವಲಿಯಕೋಯಿಕ್ಕಲ್ ಶ್ರೀಧರ್ಮಶಾಸ್ತಾ ದೇವಸ್ಥಾನದಿಂದ ಶ್ರೀ ಅಯ್ಯಪ್ಪನ ವಿಗ್ರಹಕ್ಕೆ ತೊಡಿಸಲಿರುವ ತಿರುವಾಭರಣದ ಭವ್ಯ ಮೆರವಣಿಗೆ ಆರಂಭಗೊಳ್ಳುವುದು. ಈ ಬಾರಿ ಜ. 14ರಂದು ಮಕರ ಜ್ಯೋತಿ ದರ್ಶನವಾಗಲಿದ್ದು, ಅಂದು ಸಂಜೆ 5ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಾಗುವುದು. ಸಂಕ್ರಮಣ ಸಂಧ್ಯಾಕಾಲದಲ್ಲಿ ಶ್ರೀ ಅಯ್ಯಪ್ಪ ವಿಗ್ರಹಕ್ಕೆ ತಿರುವಾಭರಣ ತೊಡಿಸಿ ದೀಪಾರಾಧನೆಯೊಂದಿಗೆ ಮಕರಜ್ಯೋತಿಯ ದರ್ಶನವಾಗಲಿದೆ. ಮಕರಸಂಕ್ರಮಣ ಪೂಜಾ ಮಹೋತ್ಸವ ಅಂಗವಾಗಿ ಜ. 19ರ ವರೆಗೆ ಶ್ರೀ ಅಯ್ಯಪ್ಪ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 19ರಂದು ರಾತ್ರಿ 11ಕ್ಕೆ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. 20ರಂದು ಬೆಳಗ್ಗೆ ಪಂದಳ ರಾಜಮನೆತನದ ಪ್ರತಿನಿಧಿಯಿಂದ ಶ್ರಿ ಅಯ್ಯಪ್ಪನ ದರ್ಶನದೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚುವ ಮೂಲಕ ಮಕರಸಂಕ್ರಮಣ ಮಹೋತ್ಸವ ಸಂಪನ್ನಗೊಳ್ಳಲಿದೆ.