ಚೆನ್ನೈ: ಶ್ರೀಹರಿಕೋಟದಲ್ಲಿ ಇರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವು ಜನವರಿಯಲ್ಲಿ ನೂರನೆಯ ಉಡಾವಣಾ ವಾಹನವನ್ನು ನಭಕ್ಕೆ ಕಳುಹಿಸಿದ ದಾಖಲೆ ಬರೆಯಲಿದೆ.
ಜನವರಿಯಲ್ಲಿ ಇಲ್ಲಿಂದ ಜಿಎಸ್‌ಎಲ್‌ವಿ ರಾಕೆಟ್ ಮೂಲಕ ಉಪಗ್ರಹವೊಂದನ್ನು ಹಾರಿಬಿಡಲಾಗುತ್ತದೆ.
ಪಿಎಸ್‌ಎಲ್‌ವಿ-ಸಿ60 ಸ್ಪೇಡೆಕ್ಸ್ ಉಡಾವಣೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್.ಸೋಮನಾಥ್ ಅವರು ಈ ವಿಷಯ ತಿಳಿಸಿದರು. 'ಸ್ಪೇಡೆಕ್ಸ್ ರಾಕೆಟ್ ಉಡಾವಣೆಯು ಈ ಕೇಂದ್ರದಿಂದ ನಡೆದಿರುವ 99ನೆಯ ಉಡಾವಣೆ' ಎಂದು ಅವರು ಹೇಳಿದರು.
ಶ್ರೀಹರಿಕೋಟದಿಂದ ಆಗಸಕ್ಕೆ ಚಿಮ್ಮಿದ ಮೊದಲ ಉಡಾವಣಾ ವಾಹನ ಎಸ್‌ಎಲ್‌ವಿ-ಇ-01. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಶ್ರೀಹರಿಕೋಟ ಇದೆ.
ಉಪಗ್ರಹಗಳ ಉಡಾವಣೆಗೆ ಎರಡನೆಯ ನೆಲೆಯನ್ನು ಇಸ್ರೊ, ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ನಿರ್ಮಿಸುತ್ತಿದೆ. ಸಣ್ಣ ಉಪಗ್ರಹಗಳ ಉಡಾವಣೆಗೆ ಇದನ್ನು ಬಳಸಿಕೊಳ್ಳಲಿದೆ. ಕುಲಶೇಖರಪಟ್ಟಿಣಂನಿಂದ ಉಡಾವಣೆ ಮಾಡುವುದರಿಂದ ಇಂಧನ ಉಳಿತಾಯ ಸಾಧ್ಯವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಏಕೆಂದರೆ ಇಲ್ಲಿಂದ ಉಡಾವಣೆ ಆಗುವ ರಾಕೆಟ್‌ಗಳು ನೇರವಾಗಿ ದಕ್ಷಿಣ ದಿಕ್ಕಿಗೆ ಸಾಗುತ್ತವೆ. ಆದರೆ ಶ್ರೀಹರಿಕೋಟದಿಂದ ರಾಕೆಟ್ ಉಡಾವಣೆ ಮಾಡಿದಾಗ, ಶ್ರೀಲಂಕಾ ಮೇಲೆ ಹಾರುವುದನ್ನು ತಪ್ಪಿಸಲು ಅದು ಆಗ್ನೇಯ ದಿಕ್ಕಿಗೆ ತೆರಳಿ ನಂತರ ದಕ್ಷಿಣ ಧ್ರುವದ ಕಡೆಗೆ ತಿರುವು ಪಡೆಯಬೇಕಾಗುತ್ತದೆ. ಕುಲಶೇಖರಪಟ್ಟಿಣಂ ಕೇಂದ್ರವು ಇನ್ನು ಎರಡು ವರ್ಷಗಳಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.