ಮುಳ್ಳೇರಿಯ: ಮಹಿಳೆಯರು ಹಾಗೂ ಮಗುವನ್ನೊಳಗೊಂಡ ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದ ಕಾರಿನಿಂದ 100.76ಗ್ರಾಂ ಮಾರಕ ಎಂಡಿಎಂಎ ಮಾದಕದ್ರವ್ಯ ವಶಪಡಿಸಿಕೊಳ್ಳಲಾಗಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ನಿರ್ದೇಶ ಪ್ರಕಾರ ಬೇಕಲ ಡಿವೈಎಸ್‍ಪಿ ವಿ.ವಿ ಮನೋಜ್ ಮೇಲ್ನೋಟದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಮುಳಿಯಾರು ಮಾಸ್ತಿಕುಂಡು ನಿವಾಸಿ ಮಹಮ್ಮದ್ ಸಹದ್(26), ಕಾಸರಗೋಡು ಕೋಟೆಕಣಿಯ ಕ್ವಾಟ್ರಸ್‍ನಲ್ಲಿ ವಾಸಿಸುವ ಶಾನವಾಸ್(50), ಈತನ ಪತ್ನಿ ಶರೀಫಾ(40) ಹಾಗೂ ಚೆಮ್ನಾಡ್ ಮೂಡಂಬಯಲ್ ನಿವಾಸಿ ಮುನೀರ್ ಎಂಬಾತನ ಪತ್ನಿ ಪಿ.ಎಂ ಶುಹೈಬಾ(38)ಬಂಧಿತರು. ಸೋಮವಾರ ನಸುಕಿಗೆ ಬೋವಿಕ್ಕಾನ-ಇರಿಯಣ್ಣಿ ರಸ್ತೆಯ ಮಂಜಕ್ಕಲ್‍ನಲ್ಲಿ ಅದೂರು ಠಾಣೆ ಇನ್ಸ್‍ಪೆಕ್ಟರ್ ವಿನೋದ್ ನೇತೃತ್ವದ ಪೊಲೀಸರ ತಂಡ ಕಾರನ್ನು ಹಿಂಬಾಲಿಸಿ ತಡೆದು ಮಾದಕದ್ರವ್ಯ ವಶಪಡಿಸಿಕೊಂಡಿದೆ. ತಾವು ಬೆಂಗಳೂರಿನ ಸಂಬಂಧಿಕರಲ್ಲಿಂದ ವಾಪಸಾಗುತ್ತಿದ್ದು, ಸಣ್ಣ ಮಗು ಇರುವುದಾಗಿ ಮಹಿಳೆಯರು ಅಳುತ್ತಾ ಪೊಲೀಸರಿಂದ ಪಾರಾಗಲು ಯತ್ನಿಸಿದರೂ, ಪೊಲೀಸರು ತಪಾಸಣೆ ಮುಂದುವರಿಸಿದಾಗ ಕಾರಿನೊಳಗೆ ದಾಸ್ತಾನಿರಿಸಿದ್ದ ಭಾರಿ ಪ್ರಮಾಣದ ಎಂಡಿಎಂಎ ಪತ್ತೆಯಾಗಿದೆ.
ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಂಡು ದಂಧೆಕೋರರರು ಮಾದಕದ್ರವ್ಯ ಸಾಗಾಟದ ಹೊಸ ಮಾರ್ಗವನ್ನು ಕಂಡುಕೊಳ್ಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಎಂಡಿಎಂಎ ಸಾಗಾಟಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.