ನ್ಯೂ ಆರ್ಲಿನ್ಸ್: ನ್ಯೂ ಆರ್ಲಿನ್ಸ್‌ನಲ್ಲಿ ಹೊಸ ವರ್ಷದ ದಿನ ವ್ಯಕ್ತಿಯೊಬ್ಬ ಟ್ರಕ್‌ನಿಂದ ಡಿಕ್ಕಿ ಹೊಡೆಸಿ 10 ಜನರನ್ನು ಕೊಂದು, 30 ಮಂದಿ ಗಾಯಗೊಳಿಸಿದ್ದಾನೆ. ಇದು ಭಯೋತ್ಪಾದಕ ದಾಳಿ ಎಂದು ಪರಿಗಣಿಸಿ ಎಫ್‌ಬಿಐ ತನಿಖೆ ನಡೆಸುತ್ತಿದೆ.
ಟ್ರಕ್ ಚಾಲಕ ಪೊಲೀಸರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ನಸುಕಿನ 3.15 ಕ್ಕೆ ಫ್ರೆಂಚ್ ಕ್ವಾರ್ಟರ್ ಜಿಲ್ಲೆಯ ಬೌರ್ಬನ್ ಸ್ಟ್ರೀಟ್‌ನಲ್ಲಿ ಸಂತೋಷಕೂಟಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದಾಗ, ಪಾದಚಾರಿಗಳ ಗುಂಪಿನ ಮೇಲೆ ಈತ ಟ್ರಕ್ ನುಗ್ಗಿಸಿದ್ದಾನೆ. ನಂತರ ಆತ ಟ್ರಕ್‌ನಿಂದ ಹೊರಬಂದು ಪೊಲೀಸರತ್ತ ಗುಂಡು ಹಾರಿಸಿದ್ದಾನೆ. ಆಗ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ಅವರ ಸ್ಥಿತಿ ಸ್ಥಿರವಾಗಿದೆ.
ನ್ಯೂ ಆರ್ಲಿನ್ಸ್ ಮೇಯರ್ ಲಾಟೋಯಾ ಕ್ಯಾಂಟ್ರೆಲ್ ಅವರು ಈ ಕೃತ್ಯವನ್ನು 'ಭಯೋತ್ಪಾದಕ ದಾಳಿ' ಎಂದು ಹೇಳಿದ್ದರೆ, ನಗರದ ಪೊಲೀಸ್ ಮುಖ್ಯಸ್ಥರು 'ಈ ಕೃತ್ಯವು ಉದ್ದೇಶಪೂರ್ವಕವಾಗಿಯೇ ನಡೆಸಿರುವುದು ಸ್ಪಷ್ಟ' ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ಈ ಹೇಳಿಕೆ ತಳ್ಳಿಹಾಕಿದ ಎಫ್‌ಬಿಐ ಅಧಿಕಾರಿಯೊಬ್ಬರು 'ಭಯೋತ್ಪಾದಕ ಕೃತ್ಯ' ಅಲ್ಲ ಎಂದಿದ್ದರು. ಆದರೆ, ಎಫ್‌ಬಿಐನ ಮತ್ತೊಬ್ಬ ಅಧಿಕಾರಿ ಅಲೆಥಿಯಾ ಡಂಕನ್, 'ಘಟನಾ ಸ್ಥಳದಲ್ಲಿ ಪತ್ತೆಯಾಗಿರುವ ಕಚ್ಚಾ ಬಾಂಬ್ ಬಗ್ಗೆ ತನಿಖೆ ನಡೆಯುತ್ತಿದೆ' ಎಂದು ತಿಳಿಸಿದ್ದಾರೆ.