ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮಂಗಲ್ಪಾಡಿ-ಕುಂಬಳೆ ಸಿಪಿಎಂನಲ್ಲಿ ಸಾಮೂಹಿಕ ರಾಜೀನಾಮೆ ಪರ್ವ ನಡೆದಿದೆ. ಸಿಐಟಿಯು ಮುಖಂಡ ಸೇರಿದಂತೆ 11 ಮಂದಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಕಾಸರಗೋಡು ಡಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸಿದರು. ಸಿಐಟಿಯು ಏರಿಯಾ ಜೊತೆ ಕಾರ್ಯದರ್ಶಿ ಹಾಗೂ ಜನರಲ್ ವರ್ಕರ್ಸ್ ಯೂನಿಯನ್ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಫಾರೂಕ್ ಶಿರಿಯ ಅವರ ನೇತೃತ್ವದಲ್ಲಿ ಸಿಪಿಎಂ ತೊರೆದು ಕಾಂಗ್ರೆಸ್ ಸೇರಿದರು. ಫಾರೂಕ್ ಶಿರಿಯ ಅವರು ಮಂಜೇಶ್ವರ ಏರಿಯಾ ಸಮಿತಿ ಸದಸ್ಯರಾಗಿ, ಬಂದ್ಯೊಡು ಸ್ಥಳೀಯ ಸಮಿತಿ ಕಾರ್ಯದರ್ಶಿಯಾಗಿ, ಬಾಲಸಂಘಂ ಏರಿಯಾ ಸಂಚಾಲಕರಾಗಿ ಹಾಗೂ ಕೆಎಸ್‍ಕೆಟಿಯು ಏರಿಯಾ ಕಾರ್ಯದರ್ಶಿಯಾಗಿ 9 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅಶ್ರಫ್ ಮುಟ್ಟಂ, ಲತೀಫ್ ಪಿಕೆ ನಗರ, ರಿಯಾಝ್ ಅಲ್ಕೋಟ್, ಬಶೀರ್, ಜಾವೇದ್ ಮಟ್ಟಂ, ಜಾಫರ್ ತಂಗಳ್, ಅಬ್ದುಲ್ಲ ಪಂಜತೊಟ್ಟಿ, ಲತೀಫ್ ಶಿರಿಯ, ಯೂಸುಫ್ ಓನಂದೆ ಮತ್ತು ಹನೀಫ್ ಶಿರಿಯ ಕಾಂಗ್ರೆಸ್ ಸೇರಿದ ಇತರರು.
ಡಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, 2006ರಿಂದ ಪಕ್ಷದ ಸದಸ್ಯರಾಗಿರುವ ಅಶ್ರಫ್ ಮುಟ್ಟಂ ಪ್ರಸ್ತುತ ಸ್ಥಳೀಯ ಸಮಿತಿ ಕಾರ್ಯದರ್ಶಿಯಾಗಿದ್ದರು. ಲತೀಫ್ ಅವರು ಪಿ.ಕೆ.ನಗರ ಶಾಖೆಯ ಕಾರ್ಯದರ್ಶಿ ಹಾಗೂ ಬಂಬ್ರಾಣ ಸ್ಥಳೀಯ ಸಮಿತಿ ಸದಸ್ಯರಾಗಿದ್ದರು. ಪಕ್ಷದ ಅವ್ಯವಸ್ಥೆಯಿಂದ ನೊಂದು ಹೊರಬಂದಿರುವ ಅವರನ್ನು ಕಾಂಗ್ರೆಸ್ಸ್ ಗೆ ಸ್ವಾಗತಿಸಿರುವುದಾಗಿ ತಿಳಿಸಿದರು.