ಗುವಾಹಟಿ: ಅಸ್ಸಾಂನಲ್ಲಿ ನಡೆಸಲಾದ ಮೂರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ₹11 ಕೋಟಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮಂಗಳವಾರ ತಿಳಿಸಿದ್ದಾರೆ.
ಕ್ಯಾಚಾರ್ ಜಿಲ್ಲೆಯ ದಿಘರ್ ಫುಲೆರ್ಟೋಲ್ ಪ್ರದೇಶದಲ್ಲಿ ₹5.1 ಕೋಟಿ ಮೌಲ್ಯದ 1.17 ಕೆಜಿ ಹೆರಾಯಿನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಕಾರ್ಯಾಚರಣೆಯಲ್ಲಿ ಧನೆಹರಿ ಪ್ರದೇಶದಲ್ಲಿ ₹38 ಲಕ್ಷ ಮೌಲ್ಯದ 73.97 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ಬಿಸ್ವ ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ದಿಲ್ಲೈ ತಿನಿಯಲಿ ಪ್ರದೇಶಲ್ಲಿ ನೆರೆ ರಾಜ್ಯದಿಂದ ಬರುತ್ತಿದ್ದ ಬಸ್ ತಡೆದ ಅಧಿಕಾರಿಗಳು ₹6 ಕೋಟಿ ಮೌಲ್ಯದ 1.22 ಕೆ.ಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ ಎಂದು ಬಿಸ್ವ ಎಕ್ಸ್‌ನಲ್ಲಿ ಪೋಸ್ಟ್ ತಿಳಿಸಿದ್ದಾರೆ.
ಅಸ್ಸಾಂ ರಾಜ್ಯವು ಡ್ರಗ್ಸ್ ನಿರ್ಮೂಲನೆಗಾಗಿ ಕಠಿಣ ಕ್ರಮಕೈಗೊಂಡಿದೆ ಎಂದೂ ಬಿಸ್ವ ಹೇಳಿದ್ದಾರೆ
ಇತ್ತೀಚೆಗಷ್ಟೇ ಗುವಾಹಟಿ ನಗರದ ಪಲ್ಟನ್ ಬಜಾರ್ ಹೋಟೆಲ್‌ನಲ್ಲಿ ವಿಶೇಷ ಕಾರ್ಯಪಡೆ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ನಡೆಸಿದರು. ಈ ವೇಳೆ ₹2.75 ಕೋಟಿ ಮೌಲ್ಯದ 416 ಗ್ರಾಂ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿತ್ತು. ನಾಗಾಂವ್ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ, ವಾಹನವೊಂದರ ಸೀಟಿನಡಿ ಬಚ್ಚಿಟ್ಟಿದ್ದ ಸುಮಾರು ₹3.25 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.