ಚಂಡೀಗಢ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 121 ಮಂದಿ ರೈತರು, ತಮ್ಮ ನಾಯಕ ದಲ್ಲೆವಾಲ್ ಅವರು ವೈದ್ಯಕೀಯ ನೆರವು ಸ್ವೀಕರಿಸುತ್ತಿದ್ದಂತೆ ಉಪವಾಸ ಕೈಬಿಟ್ಟಿದ್ದಾರೆ.
ನವೆಂಬರ್ 26ರಿಂದ ಆಮರಣಾಂತ ಉಪವಾಸ ಮಾಡುತ್ತಿದ್ದ ದಲ್ಲೆವಾಲ್, ಯಾವುದೇ ವೈದ್ಯಕೀಯ ನೆರವನ್ನೂ ಪಡೆಯಲು ನಿರಾಕರಿಸಿದ್ದರು.
ಆದರೆ, ರೈತರ ಬೇಡಿಕೆಗಳ ಕುರಿತಂತೆ ಫೆಬ್ರುವರಿ 14ಕ್ಕೆ ಕೇಂದ್ರ ಸರ್ಕಾರ ಮಾತುಕತೆಗೆ ಆಹ್ವಾನಿಸಿದ ಹಿನ್ನೆಲೆ ವೈದ್ಯಕೀಯ ನೆರವು ಪಡೆಯಲು ನಿರ್ಧರಿಸಿದ್ದರು.
ಅವರ ಆರೋಗ್ಯವು ಹದಗೆಟ್ಟಿದ್ದರಿಂದ ಮತ್ತು ಸರ್ಕಾರವು ಬೇಡಿಕೆಗಳನ್ನು ಒಪ್ಪದ ಕಾರಣ 111 ಮಂದಿ ರೈತರ ಗುಂಪು ಜನವರಿ 15ರಂದು ದಲ್ಲೆವಾಲ್ ಅವರ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಸೇರಿಕೊಂಡಿತ್ತು. ಖನೌರಿ ಬಳಿಯ ಹರಿಯಾಣದ ಗಡಿ ಭಾಗದಲ್ಲಿ ಉಪವಾಸ ಕೈಗೊಂಡಿದ್ದರು. ಜನವರಿ 17ರಂದು ಹರಿಯಾಣದ ಇನ್ನೂ 10 ಮಂದಿ ರೈತರು ಅವರೊಂದಿಗೆ ಸೇರಿಕೊಂಡಿದ್ದರು.
ಉಪ ಪೊಲೀಸ್ ಮಹಾನಿರೀಕ್ಷಕ ಮನ್ದೀಪ್ ಸಿಂಗ್ ಸಿಧು ಮತ್ತು ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ಅವರ ಸಮ್ಮುಖದಲ್ಲಿ 121 ರೈತರು ಜ್ಯೂಸ್ ಕುಡಿಯುವ ಮೂಲಕ ಉಪವಾಸವನ್ನು ಕೊನೆಗೊಳಿಸಿದರು.
ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಿಯಾ ರಂಜನ್ ನೇತೃತ್ವದ ಉನ್ನತ ಮಟ್ಟದ ಕೇಂದ್ರ ನಿಯೋಗವು ರೈತ ಮುಖಂಡ ದಲ್ಲೆವಾಲ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಪ್ರತಿನಿಧಿಗಳನ್ನು ಶನಿವಾರ ಭೇಟಿ ಮಾಡಿ ಫೆಬ್ರುವರಿ 14ರಂದು ಮಾತುಕತೆ ಪುನರಾರಂಭಕ್ಕೆ ಆಹ್ವಾನಿಸಿತ್ತು.