ನವದೆಹಲಿ: 2024ನೇ ವರ್ಷವು 1901ರಿಂದ ಇದುವರೆಗೆ ಭಾರತದಲ್ಲಿ ದಾಖಲಾದ ಅತ್ಯಂತ ಬೆಚ್ಚಗಿನ ವರ್ಷವಾಗಿದೆ. ಸರಾಸರಿ ಕನಿಷ್ಠ ತಾಪಮಾನವು ದೀರ್ಘಾವಧಿಯ ಸರಾಸರಿಗಿಂತ 0.90 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿತ್ತು ಎಂದು ಐಎಂಡಿ ಬುಧವಾರ ತಿಳಿಸಿದೆ.
2024ರ ವಾರ್ಷಿಕ ಸರಾಸರಿ ತಾಪಮಾನವು 25.75 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ಇದು ದೀರ್ಘಾವಧಿ ಸರಾಸರಿ ತಾಪಮಾನಕ್ಕಿಂತ 0.65 ಹೆಚ್ಚು.
ಸರಾಸರಿ ಗರಿಷ್ಠ ತಾಪಮಾನವು 31.25 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು, ಸಾಮಾನ್ಯಕ್ಕಿಂತ 0.20 ಡಿಗ್ರಿ ಹೆಚ್ಚು ಎಂದು ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ದಾಖಲೆಯ, ಅತಿಹೆಚ್ಚು ಸರಾಸರಿ ಕನಿಷ್ಠ ತಾಪಮಾನವು ದಾಖಲಾಗಿದೆ. ಫೆಬ್ರುವರಿಯಲ್ಲಿ ಎರಡನೇ ಅತಿ ಹೆಚ್ಚು ಸರಾಸರಿ ಕನಿಷ್ಠ ತಾಪಮಾನ ದಾಖಲಾಗಿತ್ತು ಎಂದು ಅವರು ಹೇಳಿದರು.
ಜನವರಿ: ಹಲವೆಡೆ ಸಾಮಾನ್ಯಕ್ಕಿಂತ ಕನಿಷ್ಠ ತಾಪಮಾನ
ಜನವರಿಯಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬುಧವಾರ ಮುನ್ಸೂಚನೆ ನೀಡಿದೆ. ಪೂರ್ವ ವಾಯುವ್ಯ ಮತ್ತು ಪಶ್ಚಿಮ-ಮಧ್ಯ ಪ್ರದೇಶಗಳ ಕೆಲವು ಪ್ರದೇಶಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಐಎಂಡಿಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಜನವರಿಯಲ್ಲಿ ಮಧ್ಯ ಭಾರತದ ಪಶ್ಚಿಮ ಮತ್ತು ಉತ್ತರ ಭಾಗಗಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಶೀತದ ವಾತವರಣವಿರುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.