ಲಖನೌ: ಗೋವುಗಳ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಿರುವುದಾಗಿ ಘೋಷಿಸಿರುವ ಉತ್ತರ ಪ್ರದೇಶ ಸರ್ಕಾರ, ಶೀತಗಾಳಿಯ ಸಂದರ್ಭದಲ್ಲಿ ಅಂದಾಜು 12.35 ಲಕ್ಷ ನಿರ್ಗತಿಕ ಹಸುಗಳು 7,696 ಶಿಬಿರಗಳ ಆಶ್ರಯ ಪಡೆದಿವೆ ಎಂದು ತಿಳಿಸಿದೆ.
ಒಂದೇ ಒಂದು ಹಸುವೂ ಚಳಿಯಿಂದ ಸಾಯಬಾರದು ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸೂಚನೆ ನೀಡಿದ ಬೆನ್ನಲ್ಲೇ, ರಾಜ್ಯದಾದ್ಯಂತ ಇರುವ ಆಶ್ರಯ ತಾಣಗಳಲ್ಲಿ ಟಾರ್ಪಾಲಿಯನ್, ವಾತಾವರಣವನ್ನು ಬೆಚ್ಚಗಿಡುವ ಸಾಧನಗಳು, ನೀರು, ಆಹಾರ ಸೇರಿದಂತೆ, ಅಗತ್ಯ ಸೌಕರ್ಯಗಳನ್ನು ಅಳವಡಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.
ಹಿಂಸಾಚಾರ ಏರಿಕೆ; ಕಳೆದ ಏಳು ತಿಂಗಳಲ್ಲಿ ದಾಖಲಾಗಿದ್ದು 27 ಹಲ್ಲೆ ಪ್ರಕರಣಗಳು!
'ಸದ್ಯ, ರಾಜ್ಯದಾದ್ಯಂತ 12,35,700 ಹಸುಗಳು 7,696 ಆಶ್ರಯ ತಾಣಗಳಲ್ಲಿವೆ. ಎಲ್ಲವುಗಳ ಗುಣಮಟ್ಟ ಹಾಗೂ ನಿರ್ವಹಣೆಯನ್ನು ಬಲಪಡಿಸಲು ಸರ್ಕಾರ ಉದ್ದೇಶಿಸಿದೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳೂ 2025ರ ಫೆಬ್ರುವರಿ 25ರ ಒಳಗೆ ಪೂರ್ಣಗೊಳ್ಳಲಿವೆ. ಗುಣಮಟ್ಟ ಕಾಯ್ದುಕೊಳ್ಳುವಂತೆ ಸಂಬಂಧಿತ ಏಜೆನ್ಸಿಗಳಿಗೆ ನಿರ್ದೇಶನ ನೀಡಲಾಗಿದೆ. ಶೆಡ್‌ಗಳು, ಕುಡಿಯುವ ನೀರಿನ ಸೌಕರ್ಯಗಳನ್ನು ಗಟ್ಟಿಮುಟ್ಟಾಗಿ ನಿರ್ಮಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದೆ.
ಯಾವುದೇ ಗೋ ಶಿಬಿರವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿದ್ದರೆ ಅಥವಾ ಆ ಸಂಬಂಧ ದೂರುಗಳು ಬಂದರೆ ಕೂಡಲೇ ಕ್ರಮ ಕೈಗೊಳ್ಳುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.